ಧಾರವಾಡ: ರಾಜ್ಯದಲ್ಲಿ 160 ಸಾಮಾನ್ಯ ಕ್ಷೇತ್ರಗಳಿವೆ. ಆದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಒಂದೂ ಕ್ಷೇತ್ರ ಸಿಗದಂತಾಗಿದೆ. ಅದಕ್ಕಾಗಿ ಅವರು ಕೋಲಾರ, ಚಾಮರಾಜನಗರ, ಚಾಮುಂಡೇಶ್ವರಿ, ಬಿಳಗಿ, ಬಾದಾಮಿ ಅಂತ ಸುತ್ತಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಮುಂದಿನ ಸ್ವಯಂಘೋಷಿತ ಸಿಎಂ ಅಭ್ಯರ್ಥಿಗೇ ಕ್ಷೇತ್ರ ಸಿಗದಂತಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ಜಿಲ್ಲೆಯ ಗರಗ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ಮಾಡಿದ್ದರು. ಅವರೊಬ್ಬ ಮಾಜಿ ಸಿಎಂ ಆಗಿದ್ದು, ಇದು ಕಾಂಗ್ರೆಸ್‌ನ ಪರಿಸ್ಥಿತಿ ಎಂದು ವ್ಯಂಗ್ಯವಾಡಿದರು.
ಸವಾಲುಗಳು ಬರುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಸವಾಲುಗಳಿಗೂ ಉತ್ತರ ಕೊಡುತ್ತಿದ್ದೇನೆ. ಧಾರವಾಡದಲ್ಲಿಯೂ ಒಬ್ಬ ಹೇಳಿದ್ದ, ಇಂದು ಧಾರವಾಡಕ್ಕೇ ಬಂದಿದ್ದೇನೆ, ಅಗರ್ ತುಮ್ಹಾರೆ ಪಾಸ್ ದಮ್ ಹೈತೋ ಆಯಾರೆ ಚಿ..(ನಿಮ್ಮ ಕಡೆ ಧಮ್ ಇದ್ರೆ ಬನ್ನಿ ನೋಡ್ಕೊತೇನಿ) ಅಂತಾ ಹೇಳಿ ಹೋಗುವೆ. ಮೊನ್ನೆ ಗೋಕಾಕ್ದಲ್ಲಿಯೂ ಹಾಗೆ ಮಾಡ್ತೇವೆ, ಹೀಗೆ ಮಾಡ್ತೇವೆ ಅಂದಿದ್ರು. ಇದೇನು ಪಾಕಿಸ್ತಾನ ಅಲ್ಲ, ಹಿಂದೂಸ್ತಾನ. ಧಾರವಾಡದಲ್ಲಿ ಯಾವ ಚೌಕ್ ಹೇಳ್ತಿಯೋ ಅಲ್ಲಿ ಪೆಂಡಾಲ್ ಹಾಕಿ, ಮಾತನಾಡುವೆ ಎಂದು ಬಹಿರಂಗ ಸವಾಲು ಹಾಕಿದರು.