ಹುಬ್ಬಳ್ಳಿ:ಕಾಂಗ್ರೆಸ್ನವರಿಗೆ ಧಮ್ ಇದ್ದರೆ ಲಿಂಗಾಯತ ಶೆಟ್ಟರ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಸವಾಲೆಸೆದಿದ್ದಾರೆ. ನಗರದಲ್ಲಿಂದು ಮಾತನಾಡಿದ ಬಸನಗೌಡ, ಲಿಂಗಾಯುತ ವಿಚಾರ ಮಾತನಾಡುತ್ತ ಶಾಸಕ ಬಸನಗೌಡ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಲಿಂಗಾಯತ ಜಪ ಮಾಡುತ್ತಿರುವುದು ಕಾಂಗ್ರೆಸ್, ಅವರಿಗೆ ಈಗ ಲಿಂಗಾಯತರ ಮೇಲೆ ಪ್ರೀತಿ ಬಂದಿದೆ. ಕಾಂಗ್ರೆಸ್ನವರಿಗೆ ಧಮ್ ಇದ್ದರೆ ಲಿಂಗಾಯತ ಶೆಟ್ಟರ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು. ನಮ್ಮ ಸಮುದಾಯಕ್ಕೆ ಎಲ್ಲ ಸೌಲಭ್ಯ ಸಿಕ್ಕಿದೆ, ಹೀಗಾಗಿ ಬಿಜೆಪಿ ಪರವಾಗಿದೆ. ಲಿಂಗಾಯತರಿಗೆ ಕೊಟ್ಟಿರುವ 2D ಮೀಸಲಾತಿ ಯಾವತ್ತೂ ತೆಗೆದುಹಾಕಲು ಆಗುವುದಿಲ್ಲ. ಸಿದ್ದರಾಮಯ್ಯರಿಂದ ಲಿಂಗಾಯತ ಸಮಾಜಕ್ಕೆ ನ್ಯಾಯ ಕೊಡಲು ಸಾಧ್ಯವೇ ಇಲ್ಲ ಎಂದರು.
ವ್ಯಾರಂಟಿ ಕಳೆದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗೆ ಬೆಲೆ ಇಲ್ಲ: ಮುಂದುವರೆದು, ಬಿಜೆಪಿ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಭರವಸೆಯನ್ನು ನೆರವೇರಿಸುತ್ತೇವೆ. ಆದರೆ ಕಾಂಗ್ರೆಸ್ನಂತೆ ನಾವು ಗ್ಯಾರಂಟಿ ಕಾರ್ಡ್ ನೀಡುವುದಿಲ್ಲ. ವಾರೆಂಟಿ ಮುಗಿದ ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ನ್ನು ಜನ ನಂಬುವುದಿಲ್ಲ ಅದಕ್ಕೆ ಬೆಲೆ ಇಲ್ಲ. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ರಾಜ್ಯದ ಜನತೆಗೆ ಭ್ರಮೆ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇನ್ನು ಸಿದ್ದರಾಮಯ್ಯ ಇಡೀ ಲಿಂಗಾಯತರೇ ಭ್ರಷ್ಟರು ಅಂತ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣಾ ಸಮಯದಲ್ಲಿ ಒಂದು ಸಮುದಾಯದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ:ಜಗದೀಶ್ ಶೆಟ್ಟರ್‌ಗೆ ಪಕ್ಷ ಏನೂ ಕಡಿಮೆ ಮಾಡಿಲಿಲ್ಲಾ, ಎಲ್ಲಾ ಕೊಟ್ಟಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಜೀವನದಲ್ಲಿಯೇ ಅವರು ಮಾಡಿದ ದೊಡ್ಡ ತಪ್ಪು. ಅವರು ಯಾರ ಸಲಹೆ ಕೇಳಿ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆಂಬುದು ಗೊತ್ತಿಲ್ಲ ಎಂದರು. ಹಾಗೆ, ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟರೆ ಲಿಂಗಾಯತರಿಗೆ ಹೇಗೆ ಅನ್ಯಾಯವಾಗುತ್ತೆ?, ಜಗದೀಶ್ ಶೆಟ್ಟರ್ ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ನನಗೇನು ವ್ಯತ್ಯಾಸವಾಗುವುದಿಲ್ಲ.