ಹುಬ್ಬಳ್ಳಿ:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ವತಿಯಿಂದ ಇದೇ 27ರಂದು ಬೆಂಗಳೂರು ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ಅನಂತಸುಬ್ಬರಾವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ಅನಂತಸುಬ್ಬರಾವ್ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವೈಜ್ಞಾನಿಕ ನಮೂನೆ-04 ರಿಂದ ಚಾಲಕ, ನಿರ್ವಾಹಕರಿಗೆ ಕೆಲಸದ ಭಾರ ಹೆಚ್ಚಾಗುತ್ತಿದ್ದು, ಕಾನೂನು ರೀತಿ ಓವರ್ ಟೈಮ್(ಓಟಿ) ಕೂಡ ಕೊಡುತ್ತಿಲ್ಲ. ಅಲ್ಲದೇ ನೌಕರರು ಕೆಲಸಕ್ಕೆ ಹಾಜರಾಗದ ಕಾರಣಗಳಿಂದ ಅವರನ್ನು ಕರ್ತವ್ಯದ ಮೇಲೆ ಕಳಿಸುತ್ತಿಲ್ಲ. ಇದರಿಂದ ಸಾರಿಗೆ ಸಂಸ್ಥೆಯ ನೌಕರರು ಹಲವಾರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೆಲಸಕ್ಕೆ ಹಾಜರಾಗಿರುವ ನೌಕರರಿಗೆ ವಾಹನ ಇಲ್ಲ ಹಾಗೂ ಇನ್ನಿತರ ಕಾರಣಗಳಿಂದ ನೌಕರಿಗೆ ರಜೆ ಹಾಕಲು ಒತ್ತಾಯಿಸಲಾಗುತ್ತಿದೆ. ವಾಹನ ಮಾರ್ಗ ಕೊಡುವಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅಧಿಕಾರಿಗಳು ದಲ್ಲಾಳಿಗಳನ್ನು ಘಟಕದಲ್ಲಿ ಉಳಿಸಿಕೊಂಡು ಅವರನ್ನು ಕರ್ತವ್ಯದ ಮೇಲೆ ಎಂದು ಪರಿಗಣಿಸುತ್ತಾರೆ. ಅವಶ್ಯಕತೆ ಇರುವ ನೌಕರರಿಗೆ ಹಾಗೂ ದೈಹಿಕವಾಗಿ ಬಲಹೀನರಾದವರಿಗೆ ಲಘು ಕರ್ತವ್ಯಗಳು ಸಿಗುತ್ತಿಲ್ಲ. ವರ್ಗಾವಣೆ, ಚಾರ್ಜ್ ಶೀಟ್ಗಳು ಮತ್ತು ಇಲಾಖಾ ವಿಚಾರಣೆಗಳು ಕೆಲಸಗಾರರನ್ನು ಹಿಂಸಿಸುವ ಪ್ರತಿಕ್ರಿಯೆ ನಡೆಯುತ್ತಿರುವುದು ಖಂಡನೀಯವಾಗಿದೆ ಎಂದಿದ್ದಾರೆ.
ವೇತನ, ಪಿಂಚಣಿ, ಕಾರ್ಮಿಕ ಸೌಲಭ್ಯ ಹಾಗೂ ಭದ್ರತೆ, ಜೀವ ವಿಮೆ ಹಾಗೂ ಅಪಘಾತದಲ್ಲಿ ನಿಧನ ಹೊಂದಿದವರಿಗೆ ಇಪ್ಪತ್ತೈದು ಲಕ್ಷ ಸಹಾಯಧನವನ್ನು ನೀಡುವ ಮೂಲಕ ನೌಕರರ ಕುಟುಂಬದ ಹಿತಾಸಕ್ತಿ ಕಾಪಾಡುವಂತೆ ಒತ್ತಾಯಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಚಲೋದಲ್ಲಿ ಹತ್ತರಿಂದ ಹದಿನೈದು ಸಾವಿರ ಸ್ಟಾಫ್ ಅಂಡ್ ವರ್ಕರ್ಸ್ ಪಾಲ್ಗೊಳ್ಳಲಿದ್ದಾರೆ. ಅಭಿಯಾನದ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತದೆ. ಶೀಘ್ರವಾಗಿ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ನೌಕರರ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.