ಹುಬ್ಬಳ್ಳಿ:ಧಾರವಾಡ ಜಿಲ್ಲೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಲಾಕ್ಡೌನ್ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗದ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕುಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಸ್ತೆಗೆ ಇಳಿದು ಕೊವಿಡ್-19 ಹರಡುವುದನ್ನು ತಪ್ಪಿಸುವುದಕ್ಕಾಗಿ, ಕಡ್ಡಾಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪಾನ್ ಬೀಡಾ, ಗುಟ್ಕಾ ಅಗೆದು ಸಾರ್ವಜನಿಕವಾಗಿ ಉಗುಳದಿರುವುದು. ಗುಂಪು ಗುಂಪಾಗಿ ಒಂದಡೆ ಸೇರದಿರುವಂತೆ, ಸ್ಯಾನಿಟೈಜರ್ ಅಥವಾ ಸೋಪಿನಿಂದ ಪದೇ ಪದೇ ಕೈ ಸ್ವಚ್ಛಗೊಳಿಸುವ ಕುರಿತು ಜನ ಜಾಗೃತಿಯನ್ನು ಮೂಡಿಸಿದರು. ಅಗತ್ಯ ಸೇವೆಗಳನ್ನು ಒದಗಿಸುವ ಅಂಗಡಿ, ಮನೆಗಳಿಗೆ ತೆರಳಿದ ಅಧಿಕಾರಿಗಳು ಜನರಿಗೆ ಇವುಗಳ ಮಹತ್ವ ತಿಳಿಸಿದರು.