ಹುಬ್ಬಳ್ಳಿ: ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು, ಅದನ್ನು ಅಪಘಾತವೆಂದು ಬಿಂಬಿಸಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಶಿರಡಿ ನಗರದ ನಿವಾಸಿ ಮಾರುತಿ ಲಕ್ಕಣ್ಣವರಿಗೆ ಅಮಿತ್ ಹಾಗೂ ಸಹಚರರಾದ ಶಶಿಕುಮಾರ್, ಯಲ್ಲಪ್ಪ ಹಟ್ಟಿ ಚಾಕು ಇರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕ್ಷುಲ್ಲಕ ವಿಚಾರವಾಗಿ ಮಾರುತಿ ಲಕ್ಕಣ್ಣವರ ಜತೆ ನಿನ್ನೆ ಅಮಿತ್ ಕಿರಿಕ್ ಮಾಡಿಕೊಂಡಿದ್ದ. ಈ ವೇಳೆ ಅಮಿತ್, ಮಾರುತಿ ಕೊಲೆ ಮಾಡುವ ಉದ್ದೇಶದಿಂದ ಶಶಿಕುಮಾರ್ ಹಾಗೂ ಯಲ್ಲಪ್ಪನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಬಳಿಕ ಶಶಿಕುಮಾರ್, ಮಾರುತಿ ಹೊಟ್ಟೆಗೆ ಇರಿದು ಅಮಿತ್ ಜತೆ ಪರಾರಿಯಾಗಿದ್ದಾನೆ. ಬಳಿಕ ಯಲ್ಲಪ್ಪ ಹಟ್ಟಿ ಯಾರಿಗೂ ವಿಷಯ ತಿಳಿಸದೆ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಸಾಕ್ಷ್ಯ ನಾಶಪಡಿಸುವ ನಿಟ್ಟಿನಲ್ಲಿ ಮಾರುತಿ ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ವೈದ್ಯರ ಬಳಿ ಹೇಳಿದ್ದಾನೆ ಎನ್ನಲಾಗಿದೆ.