ಧಾರವಾಡ :ಕ್ಷುಲ್ಲಕ ಕಾರಣಕ್ಕೆ ಎಸ್ಟಿ ಕುಟುಂಬದ ಮೇಲೆ ಮನಬಂದಂತೆ ಥಳಿಸಿದ ಘಟನೆ ಧಾರವಾಡ ಜಿಲ್ಲೆಯ ಮಾಧನಬಾವಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ 14 ಜನರ ಮೇಲೆ ದೂರು ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಮಾಧನಬಾವಿ ಗ್ರಾಮದ ಕಾರ್ತಿಕ್ ಪಟ್ಟಿಹಾಳ, ನಾರಾಯಣ ಹಾಗೂ ಮುದಕವ್ವ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅದೇ ಗ್ರಾಮದ ರವಿಗೌಡ ಪಾಟೀಲ, ಪಿಲ್ಲು ಮೋಹನಗೌಡ ಪಾಟೀಲ ಸೇರಿದಂತೆ ಹದಿನಾಲ್ಕು ಜನರು ಕುಟುಂಬದ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
25-01-2023 ರಂದು ಹಲ್ಲೆಗೊಳಗಾದ ಕಾರ್ತಿಕ್, ಆರೋಪಿ ರವಿಗೌಡ ಪಾಟೀಲ ಎಂಬುವರ ಮನೆ ಎದುರು ಬೈಕ್ ನಿಲ್ಲಿಸಿದ್ದ. ಬಳಿಕ ಬೈಕ್ ತೆಗೆದುಕೊಂಡು ಹೋಗುವಾಗ ಆರೋಪಿಯು ಕಾರ್ತಿಕ್‌ನನ್ನು ಕೂಗಿದ್ದಾನೆ. ಆದರೆ ಕೇಳಿಸದೇ ಹೊರಡೋಕೆ ಸಿದ್ದವಾಗುತ್ತಿರುವಾಗ ಜಾತಿ ನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಹಲ್ಲೆ ನಡೆಸಿದ್ದರು. ನಂತರ ದಿನಾಂಕ 26-01-2023 ರಂದು ಮತ್ತೆ ಇದೇ ಕಾರಣಕ್ಕೆ ಕ್ಷಮೆ ಕೇಳುವಂತೆ ಕಾರ್ತಿಕ್ ಮನೆಗೆ ಏಕಾಏಕಿ ನುಗ್ಗಿ ಎಲ್ಲರ ಮೇಲೂ ಮನಬಂದಂತೆ ಥಳಿಸಿದ್ದರು.
ಘಟನೆಯಿಂದ ಗಾಯಗಳಿದ್ದು, ತಮ್ಮ ಮೇಲೆ ವಿನಾಕಾರಣ ದಬ್ಬಾಳಿಕೆ ಮಾಡುತ್ತಿದ್ದಾರೆ. ಆರೋಪಿಗಳ ತಪ್ಪಿದ್ದರೂ ನಾವೇ ಕ್ಷಮೆ ಕೇಳುವಂತೆ ಪಟ್ಟುಹಿಡಿದಿದ್ದು, ಇದಕ್ಕೆ ನಾವು ಒಪ್ಪದಿದ್ದಾಗ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಕಾರ್ತಿಕ್ ಕುಟುಂಬದವರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಕುಟುಂಬ ವರ್ಗದವರು ಮಾದನಭಾವಿ ಗ್ರಾಮ ಬಿಟ್ಟು ಭಯದಿಂದ ಬೇರೆ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಆದ್ದರಿಂಜ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದು, ಪರಿಶಿಷ್ಟರು ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮಾಡ್ತಿದ್ದಾರೆ ಎಂದು ದೂರಿದ್ದಾರೆ.
ಮಾರುಕಟ್ಟೆಯಲ್ಲಿ ಮಾರಕಾಸ್ತ್ರಗಳ ಸದ್ದು:ಕಳೆದ ವಾರವಷ್ಟೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳು ಭಾರಿ ಸದ್ದು ಮಾಡಿದ್ದವು. ಕ್ಷುಲ್ಲಕ ಕಾರಣಕ್ಕೆ ತರಕಾರಿ ಮಾಡುತ್ತಿದ್ದವರಲ್ಲಿ ಕೆಲವರು ಏಕಾಏಕಿ ಬಂದು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ನಗರದ ಎಪಿಎಂಸಿಯಲ್ಲಿ ನಡೆದಿದೆ. ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ:ಹುಬ್ಬಳ್ಳಿ ಎಪಿಎಂಸಿಯಲ್ಲಿ ಝಳಪಿಸಿದ ಮಾರಕಾಸ್ತ್ರ.. ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಗಳ ಮಧ್ಯೆ ಮಾರಾಮಾರಿ