ಧಾರವಾಡ :ರಾಜ್ಯದ ಬಹುತೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ನಿಭಾಯಿಸಲು ಈಗಾಗಲೇ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಲು ನೂತನ ಸ್ಕೋರ್ ಕಾರ್ಡನ್ನು ಅನುಮೋದಿಸಲಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ 33ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ್ದಾರೆ.
ಕೃಷಿ ವಿವಿಯ ಅಧಿಕಾರಿ ಹುದ್ದೆಗಳ ನೇಮಕಾತಿ ಮಾಡಲು ಅನುಮತಿ ನೀಡಲಾಗಿದೆ. ರೈತರ ಮಕ್ಕಳು ಕೃಷಿ ಶಿಕ್ಷಣಕ್ಕೆ ಬರಲು ಈವರೆಗೆ ಶೇ.40ರಷ್ಟು ಮೀಸಲಾತಿ ಇದೆ. ಬರುವ ರಾಜ್ಯ ಬಜೆಟ್ನಲ್ಲಿ ಅದನ್ನು ಶೇ.50ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೃಷಿ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ಅಧಿಕವಾಗಿ ಬರುತ್ತಿದ್ದಾರೆ. ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರ ಸಂಖ್ಯೆ ಇದೆ. ಆದರೆ, ಮಹಿಳಾ ಉದ್ದಿಮೆದಾರರ ಪ್ರಮಾಣ ಶೇ.14 ಹಾಗೂ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.25ರಷ್ಟು ಮಾತ್ರ ಇದೆ.
ಕೇವಲ ಶೇ.2ರಷ್ಟು ಆಹಾರ ಸಂಸ್ಕರಣೆ ಇದೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡದ ಹೊರತು ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ, ರಾಜ್ಯದಲ್ಲಿಯೂ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ 4,525 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದರು.
ರೈತ ಬೆಳೆದ ಬೆಳೆಗಳನ್ನು ಅವರೇ ಸಂಸ್ಕರಣೆ ಮಾಡಿ, ಮಾರಾಟ ಮಾಡಿದರೆ ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯವಿದೆ. ಮೈಸೂರಿನ ಸಿಎಫ್ಟಿಆರ್ಐ ಸಂಸ್ಥೆ ಮೂಲಕ ಪ್ರತಿವಾರ ರೈತರಿಗೆ ಆಹಾರ ಸಂಸ್ಕರಣೆ, ಮೌಲ್ಯವರ್ಧನೆ ಚಟುವಟಿಕೆಗಳ ತರಬೇತಿಗೆ ಕಾರ್ಯಕ್ರಮ ರೂಪಿಸಲಾಗಿದೆ.
ಕಳೆದ ನವೆಂಬರ್ 14ರಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಮೂಲಕ ಕೃಷಿಕರ ಮನೋಸ್ಥಿತಿ ಅರಿತು, ಬದಲಾಯಿಸುವ, ಪ್ರೋತ್ಸಾಹಿಸುವ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ ಎಂದರು. ಬೆಳೆ ಸಮೀಕ್ಷೆ ತಂತ್ರಾಂಶ ಆ್ಯಪ್ ಮೂಲಕ ನಿಖರ ಕೃಷಿ ಸಮೀಕ್ಷೆ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯವು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮೂಲಕ ನೇರ ನಗದು ವರ್ಗಾವಣೆ ಮಾಡುವ ಕಾರ್ಯದಲ್ಲಿ ಶೇ.97ರಷ್ಟು ಪ್ರಗತಿ ಸಾಧಿಸಿ, ರಾಷ್ಟ್ರದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.
ರಾಷ್ಟ್ರೀಯ ಜಿಡಿಪಿಯಲ್ಲಿ ಶೇ.14ರಷ್ಟು ಪಾಲು ಹೊಂದಿರುವ ಕೃಷಿಕ್ಷೇತ್ರ ಶೇ.41.5ರಷ್ಟು ಜನರಿಗೆ ಉದ್ಯೋಗ ಒದಗಿಸಿದೆ. ಆಹಾರ ಉತ್ಪಾದನೆಯಲ್ಲಿ ಕೊರತೆಯಿಂದ ಸ್ವಾವಲಂಬನೆ ಸಾಧಿಸುವವರೆಗೆ ನಾವು ಯಶಸ್ವಿಯಾಗಿ ಮುನ್ನಡೆದಿದ್ದೇವೆ. ಹಸಿರು, ನೀಲಿ, ಶ್ವೇತ ಹಾಗೂ ಹಳದಿ ಕ್ರಾಂತಿಗಳು ಈ ಸಾಧನೆಗೆ ಕಾರಣವಾಗಿವೆ.
ಅಂತರ್ಜಲ ಮಟ್ಟ ಕಾಪಾಡುವುದು, ನೀರಾವರಿಯಲ್ಲಿ ಅಧಿಕ ನೀರು ಬಳಕೆ ಕಡಿಮೆ ಮಾಡುವುದು, ಅತ್ಯಧಿಕ ರಸಾಯನಿಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಕಡಿವಾಣ ಹಾಕಿ ಜಾಗತಿಕ ತಾಪಮಾನ ಬದಲಾವಣೆ ಹಾಗೂ ಹಸಿರುಮನೆ ಪರಿಣಾಮಗಳಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ:ಕೆಜಿಎಫ್-2ನಲ್ಲಿ ಹುಬ್ಬಳ್ಳಿ ಪೋರ.. ಯಶೋಮಾರ್ಗದಲ್ಲಿ ನಡೆಯುವ ಹಂಬಲ