ಧಾರವಾಡ/ಬೆಳಗಾವಿ: ಕ್ಷೇತ್ರಕ್ಕೆ ಪ್ರವೇಶ ನಿರ್ಭಂಧ ಇದ್ದರೂ, ಹೊರಗಿನಿಂದಲೇ ಡಿಜಿಟಲ್ ಪ್ರಸಾರ ಮಾಡಿಗೆದ್ದ ವಿನಯ್ ಕುಲಕರ್ಣಿ, ಕೋರ್ಟ್ ಮೇಲೆ ಭರವಸೆ ಇದೆ. ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಅವರು ಹಿಂದಿನ ಸರ್ಕಾರದ ಭ್ರಷ್ಟಾಚಾರ ನೋಡಿ ಜನರು ನಮಗೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ನಮ್ಮ ಮೇಲೆ ಬಹಳ ಜವಾಬ್ದಾರಿ ಇದೆ. ಈ ಬಾರಿಯ ಬಜೆಟ್ನಿಂದ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂಬುದು ಖಾತರಿಯಾಗಿದೆ. ಈ ಮೂಲಕ ಜವಾಬ್ದಾರಿನ್ನು ನಿಭಾಯಿಸುತ್ತೇವೆ ಎಂದರು.
ಧಾರವಾಡಕ್ಕೆ ಬರಲು ಅನಾನುಕೂಲ ಆಗಿದೆ. ಹೀಗಾಗಿ ಸವದತ್ತಿಯಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ಇಟ್ಟುಕೊಂಡಿದ್ದೇವೆ. ಕಾರ್ಯಕರ್ತರು ನಮಗೆ ದೊಡ್ಡ ಬಹುಮತ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಎಷ್ಟೇ ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ ಎಂದಿದ್ದಾರೆ. ಬಿಜೆಪಿಯವರು ಸದನದ ಬಾವಿಯಲ್ಲಿ ಇಳಿದು ಸುಳ್ಳು ಆಶ್ವಾಸನೆಯಿಂದ ಅಧಿಕಾರಕ್ಕೆ ಬಂದಿದ್ದೇವೆ ಎಂದು ಧರಣಿ ಮಾಡಿದ್ದಾರೆ. ಮೋಸದಿಂದ ಆಯ್ಕೆಯಾಗಿದ್ದೇವೆ ಎಂದು ಪ್ರತಿಬಿಂಬಿಸಿದ್ದಾರೆ. ಆದರೆ ಈಗ ಬಜೆಟ್‌ನಲ್ಲಿ ಎಲ್ಲ ಗ್ಯಾರಂಟಿಗಳು ಈಡೇರುವ ಬದ್ಧತೆ ಲಭಿಸಿದೆ. ಹೀಗಾಗಿ ಜನತೆಗೂ ನಮ್ಮ ಸರ್ಕಾರದ ಬಗ್ಗೆ ಭರವಸೆ ಇದೆ. ಜನರ ಭರವಸೆಯಂತೆ ನಾವು ಸರ್ಕಾರವನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಶಾಸಕರು ಹೇಳಿದ್ದಾರೆ.
ಪಂಚ ಗ್ಯಾರಂಟಿಗಳಲ್ಲಿ ಜಾರಿಗೆ ಬಂದರುವ ಮೊದಲ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಬಗ್ಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಈಗಾಗಲೇ ಜಾರಿ ಮಾಡಿದ್ದೇವೆ. ಹೆಚ್ಚಿನ ಮಹಿಳೆಯರು ಹುಮ್ಮಸ್ಸಿನಿಂದ ಅದನ್ನು ಸದ್ಭಳಕೆ ಮಾಡುತ್ತಿದ್ದಾರೆ. ಇನ್ನು ಮುಂಗಾರು ಮಳೆ ಎಲ್ಲೆಡೆ ಸರಿಯಾಗಿ ಆಗಿಲ್ಲ, ಹೀಗಾಗಿ ಮಹಿಳೆಯರು ಬಿಡುವಿನ ಸಂದರ್ಭದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಮಳೆ ಬಂದು ಕೃಷಿ ಚಟುವಟಿಕೆ ಆರಂಭವಾದರೆ ಓಡಾಟ ಕಡಿಮೆ ಆಗಲಿದೆ. ಒಟ್ಟಿನಲ್ಲಿ ಯೋಜನೆಯನ್ನು ಜನ ಉತ್ತಮವಾಗಿ ಬಳಿಸಿಕೊಳ್ಳುತ್ತಿದ್ದಾರೆ ಎಂದರು.