ಹುಬ್ಬಳ್ಳಿ:ಬಡರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತವಾಗಿರುವ ಕಿಮ್ಸ್ ಆಸ್ಪತ್ರೆ ಇದೀಗ ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿ ಮಾಡಿ ಇಬ್ಬರ ಜೀವ ಉಳಿಸಿದೆ. ಯಶಸ್ವಿಯಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿರುವ ಕಿಮ್ಸ್ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹುಬ್ಬಳ್ಳಿ ನಗರದ ನಾಗೇಶ ಮಾದರ (31) ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ. ಇವರು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿ ಇಸಿಜಿ ಮಾಡಿದಾಗ ಹೃದಯದಲ್ಲಿ ದೊಡ್ಡ ರಂಧ್ರ ಇರುವುದು ಪತ್ತೆಯಾಯಿತು. ಇವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಕೇವಲ ಕೆಲವೇ ದಿನಗಳಲ್ಲೇ ಚೇತರಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿ ಮಾಡಿದ ಕಿಮ್ಸ್ ಆಸ್ಪತ್ರೆಯ ವೈದ್ಯರು ಇದಲ್ಲದೇ 68 ವರ್ಷದ ಗಂಗಮ್ಮ ಶಿರೋಳ ಎಂಬುವವರು ಎದೆ ನೋವು ಕಾಣಿಸಿಕೊಂಡು ಇವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ಇವರಿಗೆ ಕೂಡಲೇ ಚಿಕಿತ್ಸೆ ಅನಿವಾರ್ಯವಾದ ಕಾರಣದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕಿಮ್ಸ್ ಆಸ್ಪತ್ರೆ ವೈದ್ಯರು ವಾಪಾಸ್ ಗಂಗಮ್ಮ ಶಿರೋಳ ಅವರನ್ನು ಕರೆಸಿಕೊಂಡು ಜಯದೇವ ಆಸ್ಪತ್ರೆಯ ಸಹಕಾರದೊಂದಿಗೆ ಡಾ.ಉಲ್ಲಾಸ್ ಬಿಸ್ಲೇರಿ ಮತ್ತು ತಂಡದಿಂದ ಬೈಪಾಸ್ ಹಾರ್ಟ್ ಸರ್ಜರಿ ಮಾಡುವ ಮೂಲಕ ರೋಗಿಗೆ ಮರು ಜೀವ ನೀಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಟಾನಿ ಮಾಹಿತಿ ನೀಡಿದರು.
ಕಿಮ್ಸ್ನ ಹಾರ್ಟ್ ಸೆಂಟರ್ ಮೇಲ್ವಿಚಾರಕ ಡಾ. ಹೊಸಮನಿ ಹಾಗೂ ಮತ್ತವರ ತಂಡದಿಂದ ತೆರೆದ ಹೃದಯ ಚಿಕಿತ್ಸೆ ಮಾಡಲಾಯಿತು. ಈ ತಂಡದಲ್ಲಿ ಡಾ. ನಾಗೇಂದ್ರ ಹಿರೇಗೌಡ್ರ, ಡಾ. ರಾಜಕುಮಾರ, ಡಾ. ಉಮೇಶ ಬೀಳಗಿ, ಡಾ. ಸುರೇಶ, ಡಾ. ನಿತಿನ್ ಕಡಕೊಳ್ಳ, ಡಾ. ಬಳಿಗಾರ್, ಡಾ. ಪ್ರಶಾಂತ ಇದ್ದರು.
ಇದನ್ನೂ ಓದಿ:ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಹತ್ಯೆ: ಇಬ್ಬರು ಆರೋಪಿಗಳು ಅರೆಸ್ಟ್