ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಟ್ರಾಫಿಕ್ ಕಿರಿ ಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದು, ಮಂದಗತಿಯಲ್ಲಿ ಸಾಗಿದ ಫ್ಲೈ ಓವರ್ ನಿರ್ಮಾಣ ಕಾಮಗಾರಿಯಿಂದ ಜನರು ಬೇಸತ್ತು ಹೋಗಿದ್ದಾರೆ. ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಮಾತ್ರ ಚುರುಕುಗೊಂಡಿಲ್ಲ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಬಹುದೊಡ್ಡ ವ್ಯಾಪಾರ ಕೇಂದ್ರವಾಗಿರುವ ಹುಬ್ಬಳ್ಳಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಟ್ರಾಫಿಕ್ ಕಿರಿ ಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಟ್ರಾಫಿಕ್ ಕಿರಿ ಕಿರಿ ತಪ್ಪಿಸಿ ವಾಹನ ದಟ್ಟಣೆ ಕಡಿಮೆಗೊಳಿಸಲು ಪ್ಲೈಓವರ್ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ಪ್ಲೈಓವರ್ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಜನರು ಹಿಡಿ ಶಾಪ ಹಾಕುವಂತಾಗಿದೆ.
ನಿರ್ಮಾಣ ಹಂತದಲ್ಲಿ ಇರುವ ಫ್ಲೈ ಓವರ್ನಿಂದಾಗಿ ನಿತ್ಯ ಅದೇ ದಾರಿಯಲ್ಲಿ ಅಡ್ಡಾಡುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಹುಬ್ಬಳ್ಳಿ ನಗರದ ಹೃದಯ ಭಾಗವಾಗಿರುವ ಚೆನ್ನಮ್ಮ ವೃತ್ತದ ಬಳಿ ನಿತ್ಯ ಸಂಜೆ ಸಂಚಾರ ದಟ್ಟನೆ ಹೆಚ್ಚಾಗುವುದರಿಂದ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ, ಸಿಂಗಲ್ ರೋಡ್ ಇರುವುದರಿಂದ ಸಾರ್ವಜನಿಕರಿಗೆ ಇನ್ನಷ್ಟು ಸಮಸ್ಯೆಗಳು ಹೆಚ್ಚುತ್ತಿವೆ. ಆಂಬ್ಯುಲೆನ್ಸ್ ಆಸ್ಪತ್ರೆಗೆ ತೆರಳಲು ವಿಳಂಬವಾಗಿ ರೋಗಿಗಳು ಪರದಾಡಿರುವ ಸ್ಥತಿ ಕೂಡ ನಿರ್ಮಾಣವಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಚೆನ್ನಮ್ಮ ವೃತ್ತದ ಮೂಲಕ ಹಾದು ಹೋಗುವ ಪ್ಲೈ ಓವರ್ ಸುಮಾರು 3.6 ಕಿಲೊಮೀಟರ್ ಉದ್ದವಿದ್ದು, ಚೆನ್ನಮ್ಮ ವೃತ್ತದಿಂದ ಬಾಗಲಕೋಟೆ ರಸ್ತೆಯಲ್ಲಿ ದೇಸಾಯಿ ವೃತ್ತದವರೆಗೆ, ಧಾರವಾಡ ರಸ್ತೆಯಲ್ಲಿ ಹೊಸೂರು ವರೆಗೆ, ಗದಗ ರಸ್ತೆಯಲ್ಲಿ ಅಂಬೇಡ್ಕರ್ ವೃತ್ತದವರೆಗೆ ಒಟ್ಟು 3.6 ಕಿ.ಮೀ. ನಾಲ್ಕು ಪಥದ ಫ್ಲೈಓವರ್ ನಿರ್ಮಾಣವಾಗಲಿದೆ. ಮೂರು ಹಂತದ ಯೋಜನೆಗೆ 1,242 ಕೋಟಿ ವೆಚ್ಚದ ಡಿಪಿಆರ್(ವಿವರವಾದ ಯೋಜನಾ ವರದಿ) ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.