ಹುಬ್ಬಳ್ಳಿ: ಕ್ರೀಡೆ ಎಂಬುದು ಮನುಷ್ಯನ ಕಾರ್ಯಶೀಲತೆಯನ್ನು ಹೆಚ್ಚಿಸುವುದು. ಅದರಂತೆ ಒಬ್ಬರು ಇದನ್ನು ಉದ್ಯೋಗ ಕ್ಷೇತ್ರವನ್ನಾಗಿ ಮಾಡಿಕೊಂಡರೆ, ಮತ್ತೊಬ್ಬರು ಹವ್ಯಾಸ ಮಾಡಿಕೊಳ್ಳುವರು. ಅದೇ ರೀತಿ ಇಲ್ಲೊಬ್ಬರು ಹವ್ಯಾಸಕ್ಕೆಂದು ಆಡಲು ಹೋಗಿ ಇದೀಗ ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರದಲ್ಲಿ ಮಿಂಚುತ್ತಿದ್ದಾರೆ.
ಹೌದು.. ವಿದ್ಯಾಕಾಶಿ ಎಂದು ಪ್ರಸಿದ್ಧ ಆಗಿರುವ ಧಾರವಾಡ ಜಿಲ್ಲೆ, ಶಿಕ್ಷಣಕ್ಕೆ ಅಷ್ಟೇ ಸೀಮಿತ ಅಲ್ಲದೇ ಕ್ರೀಡೆಯಲ್ಲೂ ಮೇಲುಗೈ ಸಾಧಿಸಿದೆ. ಅದರಂತೆ ಹುಬ್ಬಳ್ಳಿಯ ನಿವಾಸಿ ಅನಿತಾ ಬಿಚಗತ್ತಿ ಅಟ್ಯಾ ಪಟ್ಯಾ ಕ್ರೀಡೆಯಲ್ಲಿ ಸಾಧನೆ ಮಾಡಿ ಭಾರತ ತಂಡದ ಆಟಗಾರ್ತಿಯಾಗಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ 11 ಬಾರಿ ಆಡಿರುವ ಈ ಕುವರಿ, ರಾಜ್ಯ ಸರ್ಕಾರದ 2019 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ತರಬೇತುದಾರ ಆನಂದ ಸದ್ಲಾಪುರ ಅವರ ಗರಡಿಯಲ್ಲಿ ಪಳಗಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಅಟ್ಯಾ ಪಟ್ಯ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾಳೆ.