ಹುಬ್ಬಳ್ಳಿ :ಕನಿಷ್ಠ ವೇತನ 21 ಸಾವಿರ ಮಾಡುವುದು ಸೇರಿ ಇನ್ನಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರ ಫೆಡರೇಷನ್ ಎಐಟಿಯುಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಹುಬ್ಬಳ್ಳಿ ತಾಲೂಕು ಸಮಿತಿಗಳ ಸದಸ್ಯರು ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ರಾಜ್ಯದ್ಯಂತ 80 ಸಾವಿರ ಅಂಗನವಾಡಿ ಕೇಂದ್ರಗಳಿವೆ. 1.20 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈವರೆಗೆ ಗೌರವಧನ ಮಾತ್ರ ನೀಡುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಸೇರಿ ಜೀವನ ನಡೆಸುವುದು ಕಷ್ಟ. ಹೀಗಾಗಿ, ಸರ್ಕಾರ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ 21 ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ವಿದ್ಯಾ ನಾಶೀಪುಡಿ ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವೇತನ ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದೆ ಪ್ರಚಾರ ಪಡೆದುಕೊಂಡಿದ್ದವು. ಆದರೆ, ಒಮ್ಮೆಯೂ ನಿಗದಿತ ಸಮಯಕ್ಕೆ ಗೌರವ ಧನ ನೀಡಿಲ್ಲ. ಬೇಸಿಗೆ ರಜೆಯ ಅವಧಿಯನ್ನು ಒಂದು ತಿಂಗಳಿಗೆ ಹೆಚ್ಚಿಸಬೇಕು. ವೇತನ ಸಹಿತ ರಜೆ ನೀಡಬೇಕೆಂದು ಆಗ್ರಹಿಸಿದರು.
ಇಎಸ್‌ಐ, ಪಿಂಚಣಿ ಮೊತ್ತ ಹೆಚ್ಚಳ, ಜೀವವಿಮೆ ಸೌಲಭ್ಯಗಳನ್ನು ಒದಗಿಸಬೇಕೆಂಬುವುದು ಸೇರಿ ನಮ್ಮ ಬೇಡಿಕೆಗಳಿಗಾಗಿ ಹಲವು ಬಾರಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಬೀದಿಗಿಳಿದು ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಉಪಾಧ್ಯಕ್ಷ ಬಿ ಎ ಮುಧೋಳ, ಸಂಚಾಲಕರಾದ ಎ ಎಸ್ ಪೀರಜಾದೆ, ಕಾರ್ಯದರ್ಶಿ ದಾನಮ್ಮ ಕುಸ್ತಿ, ರೇಖಾ ಮಿರಜಕರ್, ಲಲಿತಾ ಘೋಡಕೆ ಸೇರಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.