ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯ ಕೆಎಲ್ಇ ಬಿವಿಬಿ ತಾಂತ್ರಿಕ ವಿಶ್ವವಿದ್ಯಾಲಯ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದ್ದಾರೆ. ವಿದ್ಯಾನಗರದ ಬಿವಿಬಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಹಾಗೂ ಪ್ರಭಾಕರ ಕೋರೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರುವ ದಿನಗಳಲ್ಲಿ ಮಹಾನ್ ಭಾರತ ನಿರ್ಮಿಸುವ ಗುರಿ ಹೊಂದಿದ್ದು, ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ವಿಶ್ವಕ್ಕೆ ಭಾರತದ ಸಾಧನೆಯನ್ನು ಪರಿಚಯಿಸಿ, ಭಾರತವನ್ನು ನಂಬರ್ ಒನ್ ಮಾಡುವ ಮಹದಾಸೆ ಭಾರತದಾಗಿದೆ. ಭಾರತ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ 70,000 ಸ್ಟಾರ್ಟಪ್ ಆರಂಭವಾಗಿದೆ. ಅದರಲ್ಲಿ ಶೇ 30 ರಷ್ಟು ಯುವಕರು ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದಾರೆ. ಉತ್ಪಾದನಾ ಕ್ಷೇತ್ರದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಅದು ಮೋದಿಗೆ ಸಲ್ಲುತ್ತದೆ. ಎಲ್ಲಾ ಕಾಲೇಜುಗಳಲ್ಲಿ ಫಾರೆನಿಕ್ಸ್ ಸೈನ್ಸ್ ವಿಷಯ ಕಡ್ಡಾಯಗೊಳಿಸುವ ಚಿಂತನೆ ಇದೆ ಎಂದರು.
ಕೆ.ಎಲ್.ಇ ಸಂಸ್ಥೆಯ ಕುರಿತಂತೆ ಮಾತನಾಡಿದ ಅವರು, ನಾನು ಕಳೆದ 12 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಕೆ.ಎಲ್.ಇ ಸಂಸ್ಥೆ ಬಹಳಷ್ಟು ಸಾಧಕರನ್ನು ನೀಡಿದ ಶಿಕ್ಷಣ ಸಂಸ್ಥೆಯಾಗಿದ್ದು, ದೇಶದಲ್ಲಿ ಇದು ಮಾದರಿ ಸಂಸ್ಥೆಯಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಂದಿನ 20 ವರ್ಷ ಭಾರತವು ಯುವಕರ ದೇಶವಾಗಿದ್ದು, ಭಾರತ ಜಗತ್ತಿನಲ್ಲಿ ಶ್ರೇಷ್ಠ ದೇಶವಾಗಲಿದೆ. ನಾವು ಎಷ್ಟೇ ದೊಡ್ಡವಾರಾಗಿ ಸಾಧನೆ ಮಾಡಿದರೂ ಕೂಡ ಕಲಿತ ಶಾಲೆ, ಕಲಿಸಿದ ಶಿಕ್ಷಕರು ಹಾಗೂ ಸ್ನೇಹಿತರನ್ನು ಮರೆಯಬಾರದು. ಕರ್ನಾಟಕ ಅತ್ಯಂತ ಪ್ರಗತಿಪರವಾದ ರಾಜ್ಯವಾಗಿದೆ. ಸಂಶೋಧನೆ, ವಿದೇಶಿ ಬಂಡವಾಳ ಹೂಡಿಕೆ, ಮೊದಲ ಸೆಮಿ ಕಂಡಕ್ಟರ್ ಪಾಲಿಸಿ ತಂದಿರುವುದು ಹಾಗೂ ಎಂಪ್ಲಾಯಿಮೆಂಟ್ ಪಾಲಿಸಿಯನ್ನು ಸಹ ಕರ್ನಾಟಕ ಜಾರಿಗೆ ತಂದಿದೆ ಎಂದ ಅವರು, ಡಬಲ್ ಇಂಜಿನ್ ಸರ್ಕಾರ ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದರು.
ಮಹಿಳೆಯರ ರಕ್ಷಣೆಗೆ ಕೇಂದ್ರದಿಂದ 200 ಕೋಟಿ ಹಣವನ್ನು ಅಮಿತ್ ಶಾ ನೀಡಿದ್ದಾರೆ. ಬೆಂಗಳೂರಿಗೆ 400 ಕೋಟಿ ನೀಡಿದ್ದಾರೆ. ಕೆ.ಎಲ್.ಇ ಶತಮಾನೋತ್ಸವ ಸಮಾರಂಭದಲ್ಲಿ ಇದೇ ರೀತಿ ಭಾಗವಹಿಸೋಣ ಎಂದರು. ಇದೇ ವೇಳೆ ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕಿದರು. ನಾನು ಈಗ ಕಾಲೇಜು ವಿದ್ಯಾರ್ಥಿಯಾಗಬೇಕಿತ್ತು ಎಂದು ತಾವು ಕಲಿತ ಬಿವಿಬಿ ಕ್ಯಾಂಪಸ್ ಕ್ಯಾಂಟೀನ್ ಬಗ್ಗೆ ಮನದಾಳವನ್ನು ಹಂಚಿಕೊಂಡರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಅಮಿತ್ ಶಾ ದೇಶದ ಒಳಗೆ ನುಗ್ಗುವ ಪ್ರಯತ್ನ ಮಾಡುತ್ತಿದ್ದ ಭಯೋತ್ಪಾದಕರಿಗೆ ಸಿಂಹ ಸ್ವಪ್ನವಾಗಿದ್ದಾರೆ. ದೇಶವನ್ನು ಸುರಕ್ಷಿತವಾಗಿ ಇಟ್ಟ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಜಮ್ಮು ಕಾಶ್ಮೀರದಿಂದ 370 ಆ್ಯಕ್ಟ್ ತಗೆದು ಹಾಕುವ ಮೂಲಕ ಭಯೋತ್ಪಾದಕರಿಗೆ ಬಿಸಿ ಮುಟ್ಟಿಸಿದವರು ಮೋದಿ ಮತ್ತು ಶಾ ಎಂದರು.