ಹುಬ್ಬಳ್ಳಿ:ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಜಾಸ್ತಿಯಾಗುತ್ತಿದ್ದು, ಇದರಿಂದ ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಇಂಗಾಲ, ಗಂಧಕಗಳ ಹಾವಳಿ ಹೆಚ್ಚಾಗುತ್ತಿದೆ. ಇಡೀ ಪರಿಸರದ ಸಂರಕ್ಷಣೆ ಎಲ್ಲರ ಹೊಣೆ ಆದರೂ, ತಕ್ಷಣಕ್ಕೆ ನಾವೇನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೇವೆ. ಆದರೆ ಇಲ್ಲೊಂದು ಯುವಕ ತಂಡ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಪರಿಹಾರ ಕಂಡು ಕೊಂಡಿದೆ.
ವಾಯು ಮಾಲಿನ್ಯದಿಂದ ರೋಸಿ ಹೋಗಿರುವ ಹುಬ್ಬಳ್ಳಿ - ಧಾರವಾಡ ಯುವಕರ ತಂಡವೊಂದು, ವಿನೂತನ ಪ್ರಯೋಗವೊಂದನ್ನು ಕೈಗೆತ್ತಿಕೊಂಡಿದೆ. ಇಷ್ಟು ದಿನ ಶಾಲೆಗಳಿಗೆ ಬಣ್ಣ ಬಳೆಯುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದ ಇವರು, ಇದೀಗ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈ ಜೋಡಿಸಿದ್ದು ಧೂಳು ಮುಕ್ತ ನಗರ ನಿರ್ಮಾಣ ಪಣ ತೊಟ್ಟಿದ್ದಾರೆ.
ಕಾರವಾರ ರಸ್ತೆ ಗ್ರಿಡ್ನ ಸದ್ಗುರು ಸಿದ್ಧಾರೂಢ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಜೈನ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ, ಕಸದಿಂದ ರಸ ಎಂಬ ಯೋಜನೆ ಅಡಿ ಶುದ್ಧವಾಯು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ. ವಾಯು ಮಾಲಿನ್ಯದ ನಿಯಂತ್ರಣ ಮಾಡಲು ಇದು ನೆರವಾಗಲಿದ್ದು, ಪೊಲೀಸರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಯಂತ್ರವನ್ನು ಕೊಟ್ಟಿದ್ದಾರೆ.