ಶತಮಾನದ ಶಾಲೆ ಉಳಿವಿಗಾಗಿ ಹಳೆ ವಿದ್ಯಾರ್ಥಿಗಳ ಹೋರಾಟ: ವಿದ್ಯಾದೇಗುಲ ಉಳಿಸುವ ಭರವಸೆ ನೀಡಿದ ಮೇಯರ್ ಹುಬ್ಬಳ್ಳಿ:ಶತಮಾನ ಕಂಡ ಸರ್ಕಾರಿ ಕನ್ನಡ ಶಾಲೆಯ ಉಳಿವಿಗಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರ ಹೋರಾಟ ತೀವ್ರಗೊಂಡಿದೆ. ಕನ್ನಡ ಶಾಲೆಯನ್ನು ನೆಲಸಮ ಮಾಡಿ, ಆ ಜಾಗದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡವನ್ನು ನಿರ್ಮಾಣ ಮಾಡಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಈಗಾಗಲೇ ರೂಪುರೇಷೆ ಸಿದ್ಧ ಮಾಡಿಕೊಂಡಿದೆ. ಇದು ಶಾಲೆಯ ಹಳೆ ವಿದ್ಯಾರ್ಥಿಗಳಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಹುಬ್ಬಳ್ಳಿಯ ಸರ್ಕಾರಿ ಶಾಲೆ -2 ಅತ್ಯಂತ ಹಳೆಯ ಶಾಲೆಯಾಗಿದೆ. 156 ವರ್ಷಗಳನ್ನು ಪೂರೈಸಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ನೆಲಸಮ ಮಾಡಲು ಮಹಾನಗರ ಪಾಲಿಕೆ ನಿರ್ಧಾರ ಮಾಡಿದ್ದರಿಂದ ಶಾಲೆಯ ಹಳೆ ವಿದ್ಯಾರ್ಥಿಗಳು ಮನಮುಟ್ಟುವ ಹೋರಾಟವನ್ನು ಕೈಗೊಂಡಿದ್ದಾರೆ. ನಗರದಲ್ಲಿ ಬುಧವಾರ ಬೃಹತ್ ರ‍್ಯಾಲಿ ಕೈಗೊಂಡ ಹಳೆ ವಿದ್ಯಾರ್ಥಿಗಳು ಪಾಲಿಕೆ ಮಹಾ ಪೌರರಿಗೆ ಶಾಲೆಯನ್ನು ನೆಲಸಮ ಮಾಡದಂತೆ ಮನವಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ದುರ್ಗದ ಬೈಲ್ನ ಬ್ರಾಡ್ ವೇ ರಸ್ತೆಯಲ್ಲಿರುವ ಶತಮಾನ ಕಂಡ ಸರ್ಕಾರಿ ಶಾಲೆಯನ್ನು ನೆಲಸಮ ಮಾಡಿ, ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ಮಾಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಪಾಲಿಕೆಯ ನಿರ್ಧಾರ ನೆರವೇರಲು ಬಿಡುವುದಿಲ್ಲ ಎಂದು ಹಳೇ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರು ಪಣ ತೊಟ್ಟಿದ್ದಾರೆ. ಈ ಶಾಲೆಯಲ್ಲಿ ಸಾವಿರಾರು ಜನ ಕಲಿತು ಉನ್ನತ ಹುದ್ದೆಗೇರಿದ್ದಾರೆ. ಈಗಲೂ ಸಾಕಷ್ಟು ಬಡ ಕುಟುಂಬದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಶಾಲೆಯನ್ನು ನೆಲಸಮ ಮಾಡುವ ತನ್ನ ನಿರ್ಧಾರವನ್ನು, ಮಹಾನಗರ ಪಾಲಿಕೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಶಾಲೆ ಉಳಿವಿಗಾಗಿ ಮತ್ತೆ ಹಳೆಯ ವಿದ್ಯಾರ್ಥಿಗಳ ಹೋರಾಟ ಮುಂದುವರೆದಿದ್ದರಿಂದ ಮಹಾನಗರ ಪಾಲಿಕೆಯ ಮೇಯರ್ ವೀಣಾ ಭರದ್ವಾಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಶಾಲೆ ಅತ್ಯಂತ ಹಳೆಯ ಶಾಲೆಯಾಗಿದೆ. ಹೀಗಾಗಿ ಹಾಜರಾತಿ ಕಡಿಮೆಯಾಗಿದೆ ಎಂಬ ಆರೋಪವಿದೆ. ಶಾಲಾ ಮಕ್ಕಳು ಹಾಗೂ ಹಳೆ ವಿದ್ಯಾರ್ಥಿಗಳ ಮನವಿಗೆ ಮಹಾನಗರ ಪಾಲಿಕೆ ಸ್ಪಂದಿಸಲಿದೆ. ಇಂದು ಪಾಲಿಕೆ ಆಯುಕ್ತರು ಇಲ್ಲ. ಅವರು ಬಂದ ತಕ್ಷಣ ಚರ್ಚೆ ಮಾಡಿ ಶಾಲೆ ಉಳಿವಿಗೆ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:354 ವಿದ್ಯಾರ್ಥಿಗಳಿಗೆ 3 ಶೌಚಾಲಯ! ಶೌಚಕ್ಕೆ ಸಾಲುಗಟ್ಟಿ ನಿಲ್ಲಬೇಕು ಸರ್ಕಾರಿ ಶಾಲೆಯ ಮಕ್ಕಳು