ಹುಬ್ಬಳ್ಳಿ :ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಮಾತ್ರ ನಡೆಸುತ್ತಿದ್ದ ಕೋರ್ಸ್ಗಳನ್ನು ರಾಜ್ಯವ್ಯಾಪಿ ನಡೆಸಲು ಸಂಸ್ಥೆಗಳಿಗೆ ಅವಕಾಶವಿದೆ. ವಿಶ್ವ ವಿದ್ಯಾಲಯದೊಡನೆ ರಾಜ್ಯದ ಯಾವುದೇ ನೋಂದಾಯಿತ ಶಿಕ್ಷಣ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ, ನೃತ್ಯ ಮತ್ತು ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ನಡೆಸಲು ಅನುವಾಗುವ ಪರಿನಿಯಮಗಳಿಗೆ ರಾಜ್ಯಪಾಲರ ಅಂಕಿತ ದೊರಕಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಅವರು, ಈಗಾಗಲೇ ರಾಜ್ಯದ ಏಳು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದೊಡನೆ ಒಡಂಬಡಿಕೆ ಮಾಡಿಕೊಂಡು ಕೋರ್ಸ್ ಗಳನ್ನು ನಡೆಸುತ್ತಿವೆ. ಅಂತಾರಾಷ್ಟ್ರೀಯ ವೈಯಲಿನ್ ವಾದಕರು, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಲ್. ಸುಬ್ರಹ್ಮಣ್ಯಂ ಅವರು ತಮ್ಮ ಗ್ಲೋಬಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯಲ್ಲಿ ಸಂಗೀತ ಕೋರ್ಸ್, ನೃತ್ಯ ಕಲಾವಿದೆ ಡಾ. ಅನುರಾಧ ವಿಕ್ರಾಂತ್ ಅವರು ತಮ್ಮ ದೃಷ್ಟಿ ಆರ್ಟ್ ಸೆಂಟರ್ ನಲ್ಲಿ ನೃತ್ಯಕ್ಕೆ ಸಂಬಂಧಿಸಿದ ಕೋರ್ಸ್ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಎಂಇಎಸ್ ಶಿಕ್ಷಣ ಸಂಸ್ಥೆ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು ನಾಟಕದ ಕೋರ್ಸ್ಗಳನ್ನು ನಡೆಸಲು ಒಡಂಬಡಿಕೆ ಮಾಡಿ ಕೊಂಡಿರುತ್ತವೆ.
ರಾಜ್ಯ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಯಾದ ಕರ್ನಾಟಕ ಜಾನಪದ ಪರಿಷತ್ತು ಕೂಡ ಜಾನಪದ ಕಲೆಗಳಲ್ಲಿ ಕೋರ್ಸ್ಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಇನ್ನೂ ಹತ್ತಾರು ಶಿಕ್ಷಣ ಸಂಸ್ಥೆಗಳು ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲು ಅರ್ಜಿಗಳನ್ನು ಸಲ್ಲಿಸಿವೆ. 2023-24ನೇ ಶೈಕ್ಷಣಿಕ ಸಾಲಿನಿಂದಲೇ ಈ ಸಂಸ್ಥೆಗಳಿಗೆ ಕೋರ್ಸ್ ನಡೆಸಲು ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದರು.