ಹುಬ್ಬಳ್ಳಿ:ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ - ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ಯೋಗ, ಈಗ ವಿದೇಶಿಯರ ಮನಸ್ಸು ಗೆದ್ದಿದೆ. ಯೋಗ ಅರಸಿ ವಿದೇಶಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ.
ದಕ್ಷಿಣ ಅಮೆರಿಕದ ಚೀಲೆ ಪ್ರದೇಶದ ಯುವತಿಯೊಬ್ಬರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕೂಬಿಹಾಳ ಎಂಬ ಗ್ರಾಮಕ್ಕೆ ಯೋಗ ಅರಸಿಕೊಂಡು ಬಂದಿದ್ದಾರೆ. ಆಲಿಸನ್ ಎಂಬ ಯುವತಿ ಇಲ್ಲಿನ ಬಸವ ಯೋಗ ಶಾಲೆಯಲ್ಲಿ ಯೋಗ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ಅವರು ಅಷ್ಟಾಂಗ ಯೋಗ ತರಬೇತಿಗಾಗಿ ಮೈಸೂರಿಗೆ ಬಂದು ನಿರಂತರ ಒಂದು ತಿಂಗಳ ಕಾಲ ಯೋಗಾಭ್ಯಾಸ ಮಾಡಿದ್ದರು. ಯೋಗದ ಮೇಲಿನ ಆಸಕ್ತಿಯಿಂದ, ಆಲಿಸನ್ ಪ್ರಸ್ತುತ ಧಾರವಾಡದ ಚಿಕ್ಕ ಗ್ರಾಮದಲ್ಲಿ ಕಳೆದ 13 ದಿನಗಳಿಂದ ಯೋಗದ ತರಬೇತಿ ಪಡೆಯುತ್ತಿದ್ದಾರೆ.
ತರಬೇತಿ ಬಗ್ಗೆ ಅನುಭವ ಹಂಚಿಕೊಂಡಿರುವ ಆಲಿಸನ್, "ತರಬೇತಿ ಸಾಕಷ್ಟು ಹೊಸ ಹೊಸ ಅನುಭವ ನೀಡುತ್ತಿದೆ. ಸನಾತನ ಕಾಲದಿಂದಲೂ ಭಾರತೀಯರು ಯೋಗ ಮತ್ತು ಜ್ಞಾನದಿಂದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದು, ಜಾಗತೀಕರಣದ ವೇಗದಿಂದ ಆರೋಗ್ಯದಲ್ಲಿ ಅನೇಕ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಭಾರತ ಯೋಗದ ಮುಖಾಂತರ ಪರಿಹಾರ ಕಂಡು ಕೊಂಡಿದೆ. ಪರಿಣಾಮವಾಗಿ 2015 ಜೂನ್ 21 ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಯೋಗ ಆಚರಣೆ ಜಾಗತಿಕವಾಗಿ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತಿದೆ. ಹೀಗಾಗಿ ಯೋಗ ಅಭ್ಯಾಸಕ್ಕೆ ಇಲ್ಲಿಗೆ ಬಂದಿದ್ದು, ತುಂಬಾ ಖುಷಿಯಾಗಿದೆ" ಎಂದು ಸಂತಸ ಹಂಚಿಕೊಂಡಿದ್ದಾರೆ.
ಯೋಗ ಶಿಕ್ಷಕ ಬಸವರಾಜ ಚ.ಸಂಶಿ ಮಾತನಾಡಿ, "ಇಂದಿನ ಯುವ ಜನಾಂಗ ಯೋಗಕ್ಕೆ ಮಾರು ಹೋಗುತ್ತಿರುವುದು ಸಂತಸದ ವಿಷಯ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಭಾರತದ ಯೋಗ ಪ್ರಸಿದ್ಧಿಯಾಗಿದ್ದು, ಅಮೆರಿಕದಿಂದ ಅಲಿಸನ್ ಯೋಗ ತರಬೇತಿಗಾಗಿ ನಮ್ಮ ಗ್ರಾಮಕ್ಕೆ ಬಂದಿರುವುದು ಹೆಮ್ಮೆ ತರುವ ವಿಷಯ. ಸನಾತನ ಕಾಲದ ನಮ್ಮ ಯೋಗವನ್ನು ಇನ್ನಷ್ಟು ಪ್ರಚಾರ ಪಡೆದುಕೊಳ್ಳುವಂತೆ ಮಾಡಲು ನಾವು ಭಾರತೀಯರು ಶಪಥ ಮಾಡಬೇಕಿದೆ" ಎಂದು ಹೇಳಿದರು.