ಹುಬ್ಬಳ್ಳಿ: ನಮ್ಮವರೇ ಸಿಎಂ ಆದರೆ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆ ಎನ್ನುವಷ್ಟರಲ್ಲಿಯೇ ಬೊಮ್ಮಾಯಿ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಎಂಟಿಸಿಗೆ ಬೆಣ್ಣೆ, ಉತ್ತರ ಕರ್ನಾಟಕ ಸಾರಿಗೆಗೆ ಸುಣ್ಣ ಎಂಬುವಂತೆ ಬೊಮ್ಮಾಯಿ ನೇತೃತ್ವದ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಅವರದೇ ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಭಾಗಕ್ಕೆ ಸಿಎಂ ಇದ್ದರೂ ಅನ್ಯಾಯ ತಪ್ಪಿಲ್ಲ. ಅನುದಾನ ಕೇಳಿದರೂ ಕೊಡದೇ ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಮಾಡಿದ್ದಾರೆ. ಬಿಎಂಟಿಸಿಗೆ ನೀಡಿದ ಕಾಳಜಿ ಉತ್ತರ ಕರ್ನಾಟಕದ ಸಂಸ್ಥೆಗಳಿಗಿಲ್ಲ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ.
ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯ ಸೇರಿ ಇತರೆ ವೆಚ್ಚ ಭರಿಸಲು ಬಿಎಂಟಿಸಿಗೆ 200 ಕೋಟಿ ರೂಪಾಯಿ ಮಂಜೂರು ಮಾಡಿದೆ. ಆದರೆ, ಇದಕ್ಕಿಂತ ಹೀನಾಯ ಸ್ಥಿತಿಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಸಂಸ್ಥೆ ನಿವೃತ್ತರಿಗೆ ಆರ್ಥಿಕ ಸೌಲಭ್ಯ ನೀಡಲು ಆಸ್ತಿ ಅಡವಿಟ್ಟು ಸಾಲ ಪಡೆಯಲು ಮುಂದಾಗಿದ್ದರೂ ನಯಾ ಪೈಸೆ ಅನುದಾನವಿಲ್ಲ. ಅಲ್ಲದೇ, ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಮುತುವರ್ಜಿಯಿಂದ ಪತ್ರ ಬರೆದರೂ ಯಾವುದೇ ಕಿಮ್ಮತ್ತಿಲ್ಲದಂತಾಗಿದೆ.