ಧಾರವಾಡ :ವಕೀಲರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಧಾರವಾಡ ಬಾರ್ ಅಸೋಸಿಯೇಷನ್ ವತಿಯಿಂದ ವಕೀಲರು ಪ್ರತಿಭಟನೆ ನಡೆಸಿದರು.
ವಕೀಲರು ಕೋರ್ಟ್ ಕಲಾಪದಿಂದ ಸ್ವಯಂ ಪ್ರೇರಣೆಯಿಂದ ದೂರವುಳಿದು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ಸಂಘದ ವಿನೋದ ಶಂಕರಗೌಡ ಪಾಟೀಲ್ ಎಂಬುವರ ಮೇಲೆ ಹುಬ್ಬಳ್ಳಿಯ ನವನಗರ ಎಪಿಎಂಸಿ ಪೊಲೀಸ್ ಠಾಣೆ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿ, ಹಲ್ಲೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಪ್ರಭು ಸೂರಿನ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ವಕೀಲರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆ ಹಿಂಪಡೆಯಬೇಕು. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ಮನವಿ ಸಲ್ಲಿಸಲು ಆಗಮಿಸಿದ ವಕೀಲರು ಮತ್ತು ಪೊಲೀಸರ ನಡುವೆ ಕೆಲವೊತ್ತು ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕಾರ ಮಾಡಬೇಕು ಎಂದು ಸ್ಥಳದಲ್ಲಿ ವಕೀಲರು ಪಟ್ಟು ಹಿಡಿದು ಒಳನುಗ್ಗಲು ಯತ್ನಿಸಿದರು. ಈ ವೇಳೆ ವಕೀಲರನ್ನು ಪೊಲೀಸರು ತಡೆದರು.