ಹುಬ್ಬಳ್ಳಿ :ಅವಳಿ ನಗರ ಮಹಾನಗರ ಪಾಲಿಕೆಯ ಚುನಾವಣೆ ತಯಾರಿಗೆ ಸಂಬಂಧಪಟ್ಟಂತೆ ಲೋಪಗಳ ಸರಣಿ ಮುಂದುವರಿದಿದೆ. ಈ ಮೊದಲು ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದ ವಾರ್ಡ್‌ವಾರು ಕ್ಷೇತ್ರ ಮರುವಿಂಗಡಣೆ, ಮೀಸಲಾತಿ ನಿಗದಿ ಬಳಿಕ ಇದೀಗ ಕರಡು ಮತದಾರರ ಪಟ್ಟಿಯಲ್ಲಿ ಯಡವಟ್ಟು ಮಾಡಿದೆ. ನಗರಾಭಿವೃದ್ಧಿ ಇಲಾಖೆ ಸೂಚನೆಯನ್ನು ಧಿಕ್ಕರಿಸಿ ಮನಬಂದಂತೆ ಕರಡು ಮತದಾರರ ಪಟ್ಟಿ ಸಿದ್ಧಪಡಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಬಹಿರಂಗಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಪ್ರತಿ ವಾರ್ಡ್‌ಗಳಿಗೆ ಹಂಚಿಕೆ ಮಾಡಿರುವ ಮತದಾರರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. 9ರಿಂದ 14 ಸಾವಿರ ಮತದಾರರಿಗೆ ಒಂದರಂತೆ ವಾರ್ಡ್ ವಿಂಗಡಣೆ ಮಾಡಲು ಸೂಚನೆ ಮಾಡಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಮನಬಂದಂತೆ ಮತದಾರರ ಪಟ್ಟಿ ಸಿದ್ಧಪಡಿಸಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್, ಪಟ್ಟಿಯಲ್ಲಿ ಕೆಲ ಗೊಂದಲವಾಗಿರುವುದು ಗಮನಕ್ಕೆ ಬಂದಿದ್ದು, ಸರಿಪಡಿಸುವ ಭರವಸೆ ನೀಡಿದ್ದಾರೆ.
ಕೆಲ ವಾರ್ಡ್‌ಗಳಲ್ಲಿ 6 ಸಾವಿರಕ್ಕಿಂತ ಕಡಿಮೆ ಮತದಾರರಿದ್ದರೆ, ಒಂದಿಷ್ಟು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ 15 ಸಾವಿರದ ಗಡಿ ದಾಟಿದೆ. ವಾರ್ಡ್‌ವಾರು ಮತದಾರರ ಸಂಖ್ಯೆಯಲ್ಲಿ ಇಷ್ಟರಮಟ್ಟಿಗೆ ವ್ಯತ್ಯಾಸ ಕಂಡು ಬಂದಿರುವುದು ದೊಡ್ಡ ಲೋಪವೇ ಆಗಿದೆ. ಇದರಿಂದ ಮತದಾರರ ಪಟ್ಟಿ ತಯಾರಿಕೆಯಲ್ಲಿ ಪಾಲಿಕೆ ಅಧಿಕಾರಿಗಳು ಎಡವಿರುವುದು ಸ್ಪಷ್ಟವಾಗುತ್ತಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.