ಪೊಲೀಸ್ ಅಧಿಕಾರಿಗೆ ಸಚಿವ ಪ್ರಹ್ಲಾದ್ ಜೋಶಿ ತರಾಟೆ ಹುಬ್ಬಳ್ಳಿ:ಸುಖಾ ಸುಮ್ಮನೆ ಠಾಣೆಗೆ ಕರೆಯಿಸಿ, ಬಿಜೆಪಿ ಕಾರ್ಯಕರ್ತನಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪದಡಿ ಪೊಲೀಸ್ ಅಧಿಕಾರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾಟೆಗೆ ತೆಗೆದುಕೊಂಡಿರುವ ಘಟನೆ ಹುಬ್ಬಳ್ಳಿಯ ನಿವಾಸದಲ್ಲಿ ನಡೆದಿದೆ.
ಇಲ್ಲ ಸಲ್ಲದ ಆರೋಪ ನಮ್ಮ ಮೇಲೆ ಹೊರಿಸಿ ಮನಬಂದಂತೆ ಥಳಿಸಿದ್ದಾರೆಂದು ಜೋಶಿ ಅವರಿಗೆ ಕಾರ್ಯಕರ್ತ ತಿಳಿಸಿದ್ದರಿಂದ ಕೋಪಗೊಂಡ ಕೇಂದ್ರ ಸಚಿವರು, ಪೊಲೀಸ್ ಅಧಿಕಾರಿ ಕಾಡದೇವರಮಠ ಅವರನ್ನು ತಮ್ಮ ನಿವಾಸಕ್ಕೆ ಕರೆಯಿಸಿದರು. ತಪ್ಪು ಮಾಡಿದ್ದರೆ ಶಿಕ್ಷೆ ನೀಡಿ, ಅನಾವಶ್ಯಕವಾಗಿ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ತನಗೆ ತೊಂದರೆ ನೀಡುತ್ತಿದ್ದಾರೆಂದು ಧಾರವಾಡದ ಗೊಲ್ಲರ ಓಣಿ ನಿವಾಸಿ ರವಿ ಗೊಲ್ಲರ ಎಂಬ ಬಿಜೆಪಿ ಕಾರ್ಯಕರ್ತನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದೆ ಅಳಲು ತೋಡಿಕೊಂಡನು. ಇದರಿಂದ ಮತ್ತಷ್ಟು ಗರಂ ಆದ ಸಚಿವರು ಧಾರವಾಡದ ಶಹರ್ ಠಾಣೆಯ ಇನ್ಸಪೆಕ್ಟರ್ ಕಾಡದೇವರಮಠ ಅವರನ್ನು ತರಾಟೆಗೆ ತೆಗೆದುಕೊಂಡರು.
ಹೊಡೆಯುವ ಅಧಿಕಾರ ಇದೆಯಾ? ಸಚಿವ ಜೋಶಿ ಪ್ರಶ್ನೆ; ''ನಿಮಗೆ ಏನಿದೆ ಅಧಿಕಾರ ಹೊಡೆಯೋಕೆ, ಯಾವ ಆಧಾರದ ಮೇಲೆ ಹೊಡೆದೀರಿ, ಕಾನೂನಿನಲ್ಲಿ ನಾನೇ ನಿಮಗೆ ನಾಲ್ಕು ಗುದ್ದಿದ್ರೆ ನಡೆಯುತ್ತಾ ಎಂದು ಪ್ರಶ್ನಿಸಿದರು. ಹೇಗೆ ಹೊಡೆದಿರಿ ನೀವು, ನಾಳೆ ನಾನೇ ಪೊಲೀಸ್ ಠಾಣೆಯ ಮುಂದೆ ಧರಣಿ ಕೂರುತ್ತೇನೆ. ನಾವು ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಇದನ್ನು ನಾವು ಸಹಿಸುವುದಿಲ್ಲ. ಜನರನ್ನು ಕರೆದು ಹೊಡೆಯೋ ಅಧಿಕಾರ ನಿಮಗೆ ಏನಿದೆ. ತಪ್ಪು ಮಾಡಿದ್ರೆ ಪ್ರಕರಣ ದಾಖಲಿಸಿ, ಅದನ್ನೂ ಬಿಟ್ಟು ಹೊಡಿಯೋ ಅಧಿಕಾರ ನಿಮಗೆ ಯಾರು ಕೊಟ್ಟಿದ್ದಾರೆ. ಬಿಜೆಪಿಯ ಪರ ಕೆಲಸ ಮಾಡಿದ್ರೆ ಅವರನ್ನು ಕರೆದು ಹೊಡಿತಿರಾ? ಪೊಲೀಸ್ ಠಾಣೆಯಲ್ಲಿ ರಾಜಕೀಯ ಮಾಡುತ್ತೀರಾ'' ಎಂದು ಕಿಡಿಕಾರಿದರು.
''ಹಳೇ ಕೇಸ್ ಏನಿತ್ತು ಅವರ ಮೇಲೆ, ಬಂದೂಕು ಇತ್ತು ಎಂದು ಹೇಳುತ್ತೀರಿ. ನಾಳೆ ಬಂದೂಕು ತೋರಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿತ್ತು. ಹೀಗೆ ಕರೆದು ಹಲ್ಲೆ ಮಾಡಿದ್ದೀರಿ. ನಿರಪರಾಧಿ ಕರೆದು ಹೊಡೆಯೋದು ಯಾಕೆ, ಸ್ಟೇಷನ್ಗೆ ಕರೆದು ಹೊಡೆಯೋಕೆ ನಿಮಗೆ ಯಾವ ಅಧಿಕಾರ ಇದೆ'' ಎಂದು ಪ್ರಶ್ನಿಸಿದರು.
''ನೀವು ಕರ್ತವ್ಯದ ಮೇಲೆ ಇದ್ದೀರಿ. ನಿಮ್ಮನ್ನು ಹೊಡೆದ್ರೆ ಸರಿನಾ? ಕಾನೂನು ಪ್ರಕಾರ ಅದಕ್ಕೆ ಅವಕಾಶ ಇದೆನಾ? ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಜನರ ಮೇಲೆ ಹಲ್ಲೆ ಮಾಡುವುದನ್ನು ವಿರೋಧಿಸಿ ಹೋರಾಟ ಮಾಡುತ್ತೇವೆ'' ಎಂದು ಪ್ರಹ್ಲಾದ್ ಜೋಶಿ ಹರಿಹಾಯ್ದರು.
ಇದನ್ನೂಓದಿ:ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತದಿಂದ ಗೆಲ್ಲುವುದು ಖಚಿತ: ಪ್ರಹ್ಲಾದ್ ಜೋಶಿ ವಿಶ್ವಾಸ