ಧಾರವಾಡ:ಇಸ್ರೆಲ್ ಮತ್ತು ಹಮಾಸ್ ಯುದ್ಧ ನಡೆಯುತ್ತಿದ್ದು, ಪ್ರಸ್ತುತ ಧಾರವಾಡ ಓರ್ವ ವ್ಯಕ್ತಿ ಇಸ್ರೆಲ್ನಲ್ಲಿ ಸಿಲುಕಿಕೊಂಡಿದ್ದಾರೆ. ಹೌದು, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಮೇಶ ಅವರು ಜೇರುಸೆಲಂನಲ್ಲಿ ಸಿಲುಕಿದ್ದಾರೆ. ಇಸ್ರೆಲ್‌ನ ಜೇರುಸೆಲಂನಲ್ಲಿ ಲಾಡ್ಜ್ನಲ್ಲಿರುವ ಸುಮೇಶ ಹವಾಮಾನ ಶಾಸ್ತ್ರದ ಕುರಿತ ತರಬೇತಿಗಾಗಿ ತೆರಳಿದ್ದರು.
ಜೇರುಸೆಲಂ ನಗರದ ಹೆಬ್ರು ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯವುದಕ್ಕಾಗಿ ಹೋಗಿದ್ದರು. ತರಬೇತಿಯು ಆಗಸ್ಟ್ 7ರಿಂದ ಆರಂಭಗೊಂಡಿತ್ತು. ಅಕ್ಟೋಬರ್ 22ರ ವರೆಗೆ ತರಬೇತಿ ಆಯೋಜಿಸಲಾಗಿದೆ. ಸುಮೇಶ ಲಾಡ್ಜ್ನಲ್ಲಿಯೇ ಉಳಿದುಕೊಂಡಿದ್ದಾರೆ. ಅಲ್ಲಿ ನಡೆಯಬೇಕಾಗಿದ್ದ ತರಬೇತಿ ಕೂಡ ರದ್ದಾಗಿದೆ. ಒಂದು ವಾರಕ್ಕೆ ಆಗುವಷ್ಟು ಆಹಾರವನ್ನು ಸುಮೇಶ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅಕ್ಟೋಬರ್ 22 ರವರೆಗೆ ತರಬೇತಿ ಮುಗಿಸಿ ಅ.27ಕ್ಕೆ ಭಾರತಕ್ಕೆ ಬರಬೇಕಿತ್ತು. ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸಹ ಸುಮೇಶ ಸಂಪರ್ಕದಲ್ಲಿದ್ದಾರೆ.
ಇಸ್ರೇಲ್‌ನಲ್ಲಿ ಸಿಲುಕಿದ ಕೋಲಾರ ಮೂಲದ ಮಹಿಳೆ:ಇಸ್ರೇಲ್‌ನಲ್ಲಿ ಕೋಲಾರ ಜಿಲ್ಲೆ ಮಾಲೂರು ಮೂಲದ ಮಹಿಳೆ ಶಾಂತಿ ಆಲ್ಮೇಡಾ ಸಿಲುಕಿಕೊಂಡಿದ್ದಾರೆ. ಇಸ್ರೇಲ್ನ ರಾಬ್ಸ್ನಲ್ಲಿ ನೆಲೆಸಿರುವ ಅವರು, ಅಲ್ಲಿನ ಬಂಕರ್ನಲ್ಲಿ ಆಶ್ರಯ ಪಡೆದಿದ್ದಾರೆ. ಶಾಂತಿ ಆಲ್ಮೇಡಾ ಇಸ್ರೇಲ್‌ನಲ್ಲಿ 10 ವರ್ಷಗಳಿಂದ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಸ್ರೇಲ್ ಸರ್ಕಾರದಿಂದ ತುರ್ತು ಸೈರನ್ ಮೊಳಗಿದ ಹಿನ್ನೆಲೆ, ಅವರು ಬಂಕರ್ನಲ್ಲಿ ಆಶ್ರಯ ಪಡೆದಿದ್ದಾರೆ. ಶಾಂತಿ ಆಲ್ಮೇಡಾ ಇರುವ ಪ್ರದೇಶದಲ್ಲಿ ಯಾವುದೇ ಅಪಾಯವಿಲ್ಲ. ಕೇವಲ ಬಾಂಬ್ ಹಾಗೂ ರಾಕೇಟ್ ಸದ್ದು ಮಾತ್ರ ಕೇಳಿಸುತ್ತಿದೆ. ನಾನು ಸುರಕ್ಷಿತವಾಗಿ ಇದ್ದೇನೆ. ಆಹಾರ ಹಾಗೂ ನೀರಿಗೆ ಯಾವುದೇ ತೊಂದರೆ ಇಲ್ಲ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿ ಇದ್ದೇನೆ ಎಂದು ಶಾಂತಿ ಆಲ್ಮೇಡಾ ತಿಳಿಸಿದ್ದಾರೆ ಎಂದು ಪತಿ ಗ್ರೇಶನ್ ಆಲ್ಮೇಡಾ ಮಾಹಿತಿ ನೀಡಿದರು.