ಹುಬ್ಬಳ್ಳಿ:ರಾಜ್ಯದಲ್ಲಿ ಆಡಳಿತಯಂತ್ರ ಸಂಪೂರ್ಣ ಸ್ಥಗಿತಗೊಂಡಿದ್ದು, ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿಕೊಂಡು 15 ದಿನ ಕಳೆದರೂ ಇನ್ನೂ ಸಚಿವ ಸಂಪುಟ ರಚನೆ ಮಾಡಿಲ್ಲ. ನೆರೆ ಪೀಡಿತ ಪ್ರದೇಶಗಳಿಗೆ ತಾವೊಬ್ಬರೇ ಓಡಾಡುತ್ತಿದ್ದಾರೆ, ಒಬ್ಬರೇ ಎಲ್ಲ ಕಡೆಯೂ ಓಡಾಡಲು ಸಾಧ್ಯವಾಗುತ್ತಾ..? ಒನ್ ಮ್ಯಾನ್ ಶೋ ನಿಲ್ಲಿಸಿ ಜನರ ಕಷ್ಟಕ್ಕೆ ಸ್ಪಂದಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಒತ್ತಾಯಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ನೆರೆ ಪರಿಹಾರ ಕೆಲಸ ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಯಾವೊಂದು ಕೆಲಸಗಳು ಆಗುತ್ತಿಲ್ಲ. ವಿಧಾನಸೌಧ ಬಣಗುಡುತ್ತಿದೆ ಬಿಜೆಪಿಯವರು ಸಚಿವ ಸಂಪುಟ ರಚನೆ ಮಾಡುವುದಕ್ಕೆ ಏಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ. ಬಹುಶಃ ಅತೃಪ್ತ ಶಾಸಕರಿಗಾಗಿ ಕಾಯುತ್ತಿದ್ದಾರೋ ಏನೋ ಗೊತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅನುಯಾಯಿಗಳು ದಂಧೆ ನಡೆಸುತ್ತಿದ್ದಾರೆ. ಕೇಂದ್ರದಿಂದ ಈವರೆಗೂ ಯಾವೊಬ್ಬ ಸಚಿವರೂ ಕರ್ನಾಟಕಕ್ಕೆ ಬಂದಿಲ್ಲ ಎಂದರು.