ಹುಬ್ಬಳ್ಳಿ:ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಒಂದಿಲ್ಲೊಂದು ರೀತಿಯಲ್ಲಿ ಆರ್ಥಿಕ ಹೊರೆ ಹೇರುತ್ತಾ ಬಂದಿದ್ದು, ಈಗ ಮತ್ತೊಮ್ಮೆ ಜನರು ಕಂಗಾಲಾಗುವಂತೆ ಮಾಡಿದೆ.
ಹು-ಧಾ ಜನತೆಯ ಜೇಬಿಗೆ ಪಾಲಿಕೆ ಕತ್ತರಿ ಈಗಾಗಲೇ ಆಸ್ತಿ ತೆರಿಗೆ ದರದಲ್ಲಿ ವಿಪರೀತ ಏರಿಕೆಯಿಂದಾಗಿ ರೋಸಿ ಹೋಗಿರುವ ಹು-ಧಾ ಅವಳಿ ನಗರದ ಜನತೆಗೆ ಪಾಲಿಕೆ ಮತ್ತೊಂದು ಆಘಾತ ನೀಡಿದೆ. ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆಯುವವರು ಹೆಚ್ಚುವರಿಯಾಗಿ ಭದ್ರತಾ ಠೇವಣಿ ಪಾವತಿಸಬೇಕು ಎಂಬ ನಿರ್ಧಾರವನ್ನು ಕೈಗೊಂಡಿದೆ. ಇದರಿಂದ ಜನರು ಮತ್ತೊಮ್ಮೆ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ.
ಸ್ಥಿರಾಸ್ತಿ ಹೊಂದಿದವರು 2021-22ನೇ ಸಾಲಿನಲ್ಲಿ ಶೇ.20 ರಿಂದ ಶೇ.100ರಷ್ಟು ಹೆಚ್ಚು ಆಸ್ತಿ ತೆರಿಗೆ ಸಂದಾಯ ಮಾಡಬೇಕಾದ ಪರಿಸ್ಥಿತಿಯಿದೆ. ಇದಲ್ಲದೆ, ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಮಳಿಗೆ ನಿರ್ಮಾಣಕ್ಕೂ ಪೂರ್ವ ಪ್ರತಿ ಚದರ ಮೀಟರ್ಗೆ 150 ರೂಪಾಯಿಯಂತೆ ಭದ್ರತಾ ಠೇವಣಿ ಸಂದಾಯ ಮಾಡಬೇಕು ಎಂದು ಪಾಲಿಕೆ ಹೇಳುತ್ತಿದೆ. ಅಂದರೆ, 1 ಸಾವಿರ ಚದರ ಅಡಿ (92.93 ಚದರ ಮೀಟರ್) ವಿಸ್ತೀರ್ಣದ ಕಟ್ಟಡಕ್ಕೆ 13,940 ರೂ. ನೀಡಬೇಕಿದೆ.
ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪ್ರಮಾಣಪತ್ರ ಪಡೆಯಬೇಕಾದರೆ ಪರವಾನಗಿ ಶುಲ್ಕ, ಲೇಬರ್ ಸೆಸ್, ರಸ್ತೆ ಮತ್ತು ಗಟಾರ ದುರಸ್ತಿ ಶುಲ್ಕ, ಪರಿಶೋಧನೆ, ಕೋರಿಯರ್ ವೆಚ್ಚ, ಬೆಟರಮೆಂಟ್ ಲೇವಿ, ಕಾರ್ಯವಿಧಾನ ಶುಲ್ಕ ಎಲ್ಲವನ್ನೂ ಪಾವತಿಸಬೇಕು. ಇವೆಲ್ಲದರ ಜತೆ ಇದೀಗ ಭದ್ರತಾ ಠೇವಣಿ ನೀಡಬೇಕೆಂದು ಸೂಚಿಸಲಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲೂ ನಾಗರಿಕರ ಪ್ರಾಣ ಹಿಂಡುವ ಪಾಲಿಕೆಯ ನಡೆ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಪಾಲಿಕೆಯಲ್ಲಿ ಕಳೆದೆರಡು ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.