ಧಾರಾವಾಡ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಧಾರವಾಡದ ಐಐಟಿಯಲ್ಲಿ ಕಳ್ಳತನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮ ಹೊರವಲಯದಲ್ಲಿರುವ ಐಐಟಿಯಲ್ಲಿ ಈಗಾಗಲೇ ಕಳ್ಳತನ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅಲ್ತಾಫ್ ಶೇಖಸನದಿ, ಮಹ್ಮದ್‌ಯಾಸೀನ್ ಖತೀಬ್, ಇಸ್ಮಾಯಿಲ್ ಗಿಡ್ನವರ ಹಾಗೂ ಹಾಶಂಪೀರ್ ಶೇಖಸನದಿ, ಇನಾಂಹೊಂಗಲದ ಇಮ್ರಾನ್ ರಸೂಲನವರ ಬಂಧಿತ ಆರೋಪಿಗಳಾಗಿದ್ದಾರೆ. ಜ.15 ರಂದು ಐಐಟಿಯಲ್ಲಿ ವಿವಿಧ ಕಟ್ಟಡ ಸಾಮಗ್ರಿಗಳ ಕಳ್ಳತನ ಮಾಡಿದ್ದರು.
ಆವರಣದಲ್ಲಿದ್ದ ಪೈಪ್‌ಗಳು, ಕೇಬಲ್‌ಗಳು ಸೇರಿ 2,10,405 ರೂಪಾಯಿ ಮೌಲ್ಯದ ಕಟ್ಟಡ ಸಾಮಗ್ರಿ ಕಳ್ಳತನವಾಗಿದೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿದ್ದ ಸಾಮಗ್ರಿ ಜಪ್ತಿ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರೆದಿದೆ.
ಚಿಕ್ಕೋಡಿಯಲ್ಲಿ ಕಾರು ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್: ಇನ್ನೊಂದಡೆ ಚಿಕ್ಕೋಡಿಯಲ್ಲಿ ಜಿಪಿಎಸ್ ಮುಖಾಂತರ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರು ಹುಕ್ಕೇರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾರಿನ ಬ್ರೋಕರ್ ಓರ್ವ ಮಾರಾಟವಾಗಿರುವ ಕಾರನ್ನು ಜಿಪಿಎಸ್ ಮುಖಾಂತರ ಟ್ರೇಸ್ ಮಾಡಿ ಮತ್ತದೇ ಕಾರನ್ನು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಪ್ರಕರಣ ಇದಾಗಿದೆ.
ಮಹಾರಾಷ್ಟ್ರದ ಔರಂಗಾಬಾದ್ ಗ್ರಾಮದ ರವೀಂದ್ರ ದಾಮೋದರ್ ರಾಠೋಡ್, ಮಂಜುನಾಥ್ ಮದಕರಿ, ಶಿವಪ್ರಸಾದ್ ಕೆರಿ ಮತ್ತು ಸೋಮನಾಥ್ ಪಾಟೀಲ್ ಎಂಬ ಆರೋಪಿಗಳನ್ನು ಕಳ್ಳತನ ಹಾಗೂ ವಂಚನೆ ಪ್ರಕರಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆಯ ವಿವರ:2022ರ ಜುಲೈ ತಿಂಗಳಲ್ಲಿ ಹುಕ್ಕೇರಿ ತಾಲೂಕಿನ ಹಂಜ್ಯಾನಟ್ಟಿ ಗ್ರಾಮದಲ್ಲಿ ನಡೆದ ಕಾರು ಕಳ್ಳತನ ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಳುವಾದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮಹಾರಾಷ್ಟ್ರದ ಔರಂಗಾಬಾದ್‌ನ ನಿವಾಸಿಯಾದ ರವಿಂದ್ರ ದಾಮೋದರ್ ರಾಠೋಡ್. ಈತ ಗಡಹಿಂಗ್ಲಜ್ ಎಂ.ಎಸ್.ಆರ್.ಟಿ.ಸಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದನು. ಕಾರಣಾಂತರಗಳಿಂದ ಕೆಲಸ ಕಳೆದುಕೊಂಡು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ವ್ಯವಹಾರ ಮಾಡುತ್ತಿದ್ದನು ಎಂಬುದು ತಿಳಿದುಬಂದಿದೆ.
ನಕಲಿ ದಾಖಲಾತಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ: ಹೀಗೆ ಬೇರೆಯವರ ಕಾರುಗಳನ್ನು ಮಾರಾಟ ಮಾಡುವುದಾಗಿ ಹೇಳಿ ಪಡೆದುಕೊಂಡ ನಂತರ ಕಾರುಗಳ ನಂಬರ್ ಬೋರ್ಡ್ಗಳನ್ನು ಬದಲಾಯಿಸುತ್ತಿದ್ದ. ಇದರ ಜೊತೆಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದ. ಹಣ ಪಡೆದುಕೊಂಡ ಮೇಲೆ ಆ ವಾಹನದಲ್ಲಿ ಅಳವಡಿಸಿದ್ದ ಜಿಪಿಎಸ್ ಮುಖಾಂತರ, ಆ ವಾಹನ ಎಲ್ಲಿದೆ ಎಂದು ಪತ್ತೆ ಮಾಡುತ್ತಿದ್ದ. ಕಾರು ಇರುವ ಸ್ಥಳ ಗೊತ್ತಾಗುತ್ತಿದಂತೆ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಗಡಹಿಂಗ್ಲಜ್ ತಾಲ್ಲೂಕಿನಲ್ಲಿರುವ ಪರಿಚಯಸ್ಥ ಮೂವರು ಸ್ನೇಹಿತರಿಗೆ ಹೇಳಿ ಅವರಿಂದ ಆ ವಾಹನವನ್ನು ಕಳ್ಳತನ ಮಾಡಿಸಿದ್ದನು.
ಅದೇ ವಾಹನವನ್ನು ಮತ್ತೆ ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದ. ಈ ಪ್ರಕರಣ ಕೈಗೆತ್ತಿಕೊಂಡ ಹುಕ್ಕೇರಿ ಪೊಲೀಸರು ನೆರೆಯ ಮಹಾರಾಷ್ಟ್ರದ ಗಡಹಿಂಗ್ಲಜ್ ಕೊಲ್ಲಾಪುರ, ಪುಣೆ, ನಾಸಿಕ್, ಔರಂಗಾಬಾದ್ ಹಾಗೂ ಪಂಡರಾಪುರಗಳಲ್ಲಿ ಶೋಧ ಕಾರ್ಯಾಚರಣೆ ಮಾಡಿದ್ದರು. ಈ ವೇಳೆ ಕಳುವಾದ ಕಾರು ಹಾಗೂ ಆರೋಪಿತರು ಕೃತ್ಯಕ್ಕಾಗಿ ಉಪಯೋಗಿಸಿದ ಮೋಟರ್ ಸೈಕಲ್ ಜಪ್ತಿ ಮಾಡಿದ್ದರು.
ಓದಿ:ಜಿಪಿಎಸ್ ಮೂಲಕ ಕಾರು ಕಳ್ಳತನ; ಹುಕ್ಕೇರಿ ಪೊಲೀಸರ ಬಲೆಗೆ ಬಿದ್ದ ಕಳ್ಳರ ಗ್ಯಾಂಗ್