ಧಾರವಾಡ:ಕೆಜಿ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳ ರಕ್ಷಣೆ ಬಗ್ಗೆ ಡಿಕೆಶಿ ಹೇಳಿಕೆ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು, 31 ವರ್ಷದ ಹಿಂದೆ ರಾಮ ಜನ್ಮಭೂಮಿಗೆ ಹೋರಾಟ ಮಾಡಿದವರನ್ನು ಸಮಾಜ ವಿದ್ರೋಹಿಗಳಂತೆ ನೋಡ್ತಾರೆ. ಆದ್ರೆ, ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಆರೋಪಿಗಳು ಮತ್ತು ಹಳೇ ಹುಬ್ಬಳ್ಳಿ ಪ್ರಕರಣದ ಆರೋಪಿಗಳು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರೂ ಅವರನ್ನು ಅಮಾಯಕರಂತೆ ಕಾಣುತ್ತಾರೆ ಎಂದು ಹರಿಹಾಯ್ದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದರಲ್ಲಿ ಬಹಳ ದುರುದ್ದೇಶವಿದೆ. ಇದರ ಹಿಂದೆ ತುಷ್ಟೀಕರಣದ ರಾಜಕಾರಣವಿದೆ. ಇದು ತುಷ್ಟೀಕರಣದ ಪರಾಕಾಷ್ಠೆ ಬಗ್ಗೆ ಈಗಾಗಲೇ ಜನ ಹೋರಾಟದ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.
31 ವರ್ಷದ ಹಿಂದೆ ರಾಮ ಜನ್ಮಭೂಮಿಗೆ ಹೋರಾಟದ ಫಲದಿಂದ ಒಳಹೋದ ಹಿಂದೂ ಕಾರ್ಯಕರ್ತ ಹೊರಬಂದಿದ್ದಾರೆ. ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹಿಂದು ಕಾರ್ಯಕರ್ತರನ್ನು ಬಂಧಿಸುವವರಿದ್ದರು. ಅರೆಸ್ಟ್ ಮಾಡೋ ಅಧಿಕಾರಿಗಳಿಗೆ ಮತ್ತೆ ಯಾರನ್ನಾದರೂ ಬಂಧಿಸಿದ್ದಲ್ಲಿ ದೊಡ್ಡ ಹೋರಾಟ ಆಗುತ್ತದೆ ಅಂತಾ ಹೇಳಿದ್ವಿ, ಆ ಬಳಿಕ ನಿಲ್ಲಿಸಿದ್ದಾರೆ ಎಂದು ಜೋಶಿ ತಿಳಿಸಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಆರೋಪಿಗಳು ಗಲಾಟೆ ವೇಳೆ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದರು. ಹಳೇ ಹುಬ್ಬಳ್ಳಿ ಘಟನೆಯ ಆರೋಪಿಗಳು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೋಗಿದ್ದರು. ಇಂಥ ಆರೋಪಿಗಳನ್ನು ಹಾಗೂ ದೇಶದ್ರೋಹದ ಚಟುವಟಿಕೆ ಮೂಲ ಉದ್ದೇಶ ಇರುವ ಪಿಎಫ್ಐ ಕಾರ್ಯಕರ್ತರನ್ನು ಕಾಂಗ್ರೆಸ್ನವರು ಬೆಂಬಲಿಸುತ್ತಾರೆ. ಆದರೆ ಹಿಂದು ಕಾರ್ಯಕರ್ತರನ್ನು ಬಂಧಿಸುತ್ತಾರಂದ್ರೆ ಕಾಂಗ್ರೆಸ್ ದುಸ್ಥಿತಿ ಏನಿದೆ ನೋಡಿ ಎಂದು ಹರಿಹಾಯ್ದರು.