ಹುಬ್ಬಳ್ಳಿ:ಪೊಲೀಸರ ಕಣ್ಣು ತಪ್ಪಿಸಿಕೊಂಡು 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಮಾರ ಸೂರಪ್ಪ ಶೆಟ್ಟಿ ಬಂಧಿತ ಆರೋಪಿ. ಈತ ಪದೇ ಪದೇ ವಿಳಾಸವನ್ನು ಬದಲಾಯಿಸುತ್ತ ತಲೆಮರೆಸಿಕೊಂಡಿದ್ದರಿಂದ ಈ ಪ್ರಕರಣವು ನ್ಯಾಯಾಲಯದಲ್ಲಿ ಎಲ್.ಪಿ.ಸಿ. ಪ್ರಕರಣವಾಗಿತ್ತು.
ಆರೋಪಿಯ ಪೂರ್ಣ ಹೆಸರು, ವಿಳಾಸ ಮತ್ತು ಭಾವಚಿತ್ರ ಇಲ್ಲದೇ ಇರುವುದರಿಂದ ಅವನನ್ನು ಪತ್ತೆ ಮಾಡುವುದು ಇಲಾಖೆಗೆ ಸವಾಲಾಗಿತ್ತು. ಆರೋಪಿಯ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರೆಸ್ಟ್ ವಾರೆಂಟ್‌ನ್ನು ಹೊರಡಿಸಿದ್ದು, ಅದರಂತೆ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಆರೋಪಿಯ ಜಾಡು ಹಿಡಿದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಅಂದಿನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ ಬಿ ಆರ್ ರವಿಕಾಂತೇಗೌಡ ಅವರು ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಪೊಲೀಸರು ಆರೋಪಿಯನ್ನು 2002ರ ಡಿಸೆಂಬರ್ 9 ರಂದು ಬಂಧಿಸಿದ್ದರು. ಆ ವೇಳೆ ಆತನ ಮನೆ ಮತ್ತು ಆತನ ಬಳಿಯಿಂದ ಒಟ್ಟು 11 ಕ್ವಿಂಟಲ್ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಅಷ್ಟೇ ಅಲ್ಲ, ಆರೋಪಿಯಿಂದ ಗಾಂಜಾ ಮಾರಾಟ ಮಾಡಲು ಬಳಸಿದ್ದ ಸ್ಕೂಟಿ, ಒಂದು ಬುಲೆಟ್ ಮತ್ತು ಒಂದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಒಟ್ಟು ಮೌಲ್ಯ 24 ಲಕ್ಷ 90 ಸಾವಿರ ರೂಪಾಯಿ ಆಗಿತ್ತು. ಈ ಬಗ್ಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.