ಹುಬ್ಬಳ್ಳಿ: ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 1.14 ಕೋಟಿ ರೂ. ಹಣದ ಸಮೇತ ಒಂದು ಮೊಬೈಲ್ ಜಪ್ತಿ ಮಾಡಿರುವಂತಹ ಘಟನೆ ನಗರದ ಬಸವನದ ಬಳಿಯ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ. ನಿನ್ನೆ ರಾತ್ರಿ ಪೊಲೀಸರು ಪೆಟ್ರೋಲಿಂಗ್ ಮಾಡುವಾಗ ಯುವಕನೊಬ್ಬ ಅಕ್ರಮವಾಗಿ ಹಣವನ್ನು ಹುಬ್ಬಳ್ಳಿಯಿಂದ ಮಂಗಳೂರಿಗೆ ಸಾಗಿಸುತ್ತಿದ್ದಾನೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ರಿತೀಕ್ ಪ್ರಮೋದ ಬಸವ (23) ಎಂಬ ಯುವಕನನ್ನು ಬಂಧಿಸಿದ್ದಾರೆ. ಬಂಧಿತನಿಂದ 1.14 ಕೋಟಿ ರೂ. ಹಣ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಎಂ ಎಸ್ ಹೂಗಾರ ನೇತೃತ್ವದಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ಮಾಡಿ, ಹೊಸ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಮತ್ತು ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉಪನಗರ ಠಾಣೆ ಪೊಲೀಸರ ಕಾರ್ಯಕ್ಕೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋಲ್ಡ್ ಬಿಸ್ಕತ್ಗಾಗಿ ಕಿಡ್ನ್ಯಾಪ್ (ಮಂಗಳೂರು):ಶನಿವಾರ ಗೋಲ್ಡ್ ಬಿಸ್ಕತ್ ವಿಚಾರದಲ್ಲಿ ಇಬ್ಬರು ಸಹೋದರರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪದಡಿ ಐದು ಮಂದಿ ಖದೀಮರನ್ನು ಬಂಧಿಸುವಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದರು. ಅರ್ಕುಳ ಗ್ರಾಮದ ರೈಲ್ವೆ ಹಳಿ ಬಳಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ರೈಲ್ವೆ ಹಳಿ ಬಳಿ ಕೆಲವರು ಮಾತನಾಡುತ್ತಿದ್ದದ್ದನ್ನು ಕಂಡು ವಿಚಾರಿಸಲು ಹೋಗಿದ್ದಾರೆ. ಖದೀಮರು ಪೊಲೀಸರ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಿ, ಓಡಿ ಹೋಗಿದ್ದಾರೆ. ಆಗ ಗ್ರಾಮಾಂತರ ಪೊಲೀಸರು ಸಿಸಿಟಿವಿ, ವಾಹನ ಸಂಖ್ಯೆಯನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಿದ್ದ ವೇಳೆ ಶಾರೂಕ್ ಎಂಬಾತನನ್ನು ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳು :ಅಪಹರಣದ ಆರೋಪದಡಿ ಉಪ್ಪಿನಂಗಡಿಯ ಕರ್ವೇಲ್ ಸಿದ್ದಿಕ್ (39) ಬಂಟ್ವಾಳದ ಕಲಂದರ್ ಸಾಫಿ ಗಡಿಯಾರ(22), ಬೆಳ್ತಂಗಡಿಯ ಮುಹಮ್ಮದ್ ಇರ್ಷಾದ್ (28), ಬಂಟ್ವಾಳದ ಇರ್ಫಾನ್ (38), ಮಂಗಳೂರಿನ ಮೊಹಮ್ಮದ್ ರಿಯಾಜ್ (33) ಬಂಧಿತರು.
ಕಡಬ ಪೊಲೀಸ್ ಠಾಣೆಯಲ್ಲಿ ದೂರು : ಈ ಘಟನೆಯ ಬಗ್ಗೆ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಂಗಳೂರಿನಲ್ಲಿ ಮಾತನಾಡಿ, ಆರೋಪಿಗಳು ಕಡಬ ತಾಲೂಕಿನ ಕೊಯಿಲ ಗ್ರಾಮದ ಶಾರೂಕ್ ಹಾಗೂ ಆತನ ಸಹೋದರ ನಿಜಾಮುದ್ದೀನ್ ಅನ್ನು ಕಿಡ್ನ್ಯಾಪ್ ಮಾಡಿದ್ದರು. ಶಾರೂಕ್ನ ಕಿಸೆಯಲ್ಲಿದ್ದ 22,500 ನಗದು ಹಾಗೂ ಮೊಬೈಲ್ ದರೋಡೆ ಮಾಡಿದ್ದರು. ನಿಜಾಮುದ್ದೀನ್ ಬಳಿಯಲ್ಲಿದ್ದ ಮೊಬೈಲ್ ದರೋಡೆ ಮಾಡಿ ಆತನಿಗೆ ಥಳಿಸಿ 4 ಲಕ್ಷ ರೂ ತಂದುಕೊಡುವವರೆಗೂ ನಿನ್ನ ಸಹೋದರ ಶಾರೂಕ್ನನ್ನು ಬಿಡುವುದಿಲ್ಲ ಎಂದು ಹೇಳಿ ಆತನನ್ನು ಕಳುಹಿಸಿದ್ದರು. ನಿಜಾಮುದ್ದೀನ್ ಮನೆಗೆ ಬಂದಾಗ ತೀವ್ರ ಅಸ್ವಸ್ಥಗೊಂಡಿದ್ದರಿಂದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದರು.
ಇತ್ತ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅರ್ಕುಳ ಗ್ರಾಮದ ರೈಲ್ವೆ ಹಳಿಯ ಬಳಿ ಆಲ್ಟೋ ಕಾರಿನಲ್ಲಿದ್ದವರನ್ನು ಬೀಟ್ ಪೊಲೀಸರು ವಿಚಾರಿಸಿದ್ದರು. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇವರು ಶಾರೂಕ್ ನನ್ನು ಅಪಹರಣ ನಡೆಸಿರುವುದು ಬೆಳಕಿಗೆ ಬಂದಿದೆ ಎಂದಿದ್ದರು.
ಗೋಲ್ಡ್ ಬಿಸ್ಕತ್ಗಾಗಿ ಅಪಹರಣ : ಅಪಹರಣಕ್ಕೊಳಗಾದ ಶಾರೂಕ್ ಸಂಬಂಧಿಕ (ಆತನ ಹೆಸರು ಶಾರೂಕ್) ದುಬೈನಲ್ಲಿ ಇದ್ದು ಆತ ಯಾರೋ ನೀಡಿದ್ದ ಗೋಲ್ಡ್ ಬಿಸ್ಕತ್ನ್ನು ಅಕ್ರಮವಾಗಿ ಮಂಗಳೂರಿಗೆ ತಂದಿದ್ದನು. ಆದರೆ ಅದನ್ನು ಆತ ಸಂಬಂಧಪಟ್ಟವರಿಗೆ ನೀಡಿರಲಿಲ್ಲ. ಇದರಿಂದ ಕುಖ್ಯಾತ ಕ್ರಿಮಿನಲ್ವೊಬ್ಬ ಆತನ ಸಂಬಂಧಿಗಳನ್ನು ಒತ್ತೆಯಾಗಿರಲು ಸೂಚಿಸಿದಂತೆ, ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಅಬೂಬಕ್ಕರ್ ಸಿದ್ದೀಕ್ ಯಾನೆ, ಕರ್ವೇಲ್ ಸಿದ್ದಿಕ್ ಯಾನೆ, ಜೆಸಿಬಿ ಸಿದ್ದೀಕ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೊಲೆಯತ್ನ ಪ್ರಕರಣ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಒಂದು ಕಿಡ್ನ್ಯಾಪ್ ಪ್ರಕರಣ, ಆರೋಪಿ ಕಲಂದರ್ ಶಾಫಿ ಗಡಿಯಾರನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣ, ಇರ್ಫಾನ್ ವಿರುದ್ಧ ಬಂಟ್ವಾಳ ಮತ್ತು ಉಳ್ಳಾಲ ಠಾಣೆಯಲ್ಲಿ ತಲಾ ಒಂದು ಪ್ರಕರಣ, ಮೊಹಮ್ಮದ್ ರಿಯಾಜ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಒಂದು ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಓದಿ :ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ₹10 ಲಕ್ಷ ಬಹುಮಾನ!