ಹುಬ್ಬಳ್ಳಿ : ಇದೇ ಶುಕ್ರವಾರ ನವೆಂಬರ್ 24 ರಂದು ಬ್ಯಾಡ್ ಮ್ಯಾನರ್ಸ್ ಚಿತ್ರ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನ ಕಲಾವಿದರಿಗೆ ಬಹಳ ಗೌರವ ಕೊಡ್ತಾರೆ. ಈ ಭಾಗದ ಜನರ ಆಶೀರ್ವಾದ ತೆಗೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಇಡೀ ಸಿನಿಮಾ ಕರ್ನಾಟಕದಲ್ಲಿ ಶೂಟಿಂಗ್ ಆಗಿದೆ. ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಲಾವಿದರು ಇದ್ದಾರೆ ಎಂದು ಹೇಳಿದರು.
ಸಿನಿಮಾ ಪ್ಯಾನ್ ಇಂಡಿಯಾ ಮಾಡ್ತೀವಿ ಅಂದ್ರೆ ಕಷ್ಟ. ಪ್ಯಾನ್ ಇಂಡಿಯಾಗಿಂತ ಒಳ್ಳೆ ಸಿನಿಮಾ ಮಾಡಬೇಕು. ಸಿನಿಮಾ ನೋಡಿದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾನಾ ಇದು ಎಂದು ಜನ ಡಿಸೈಡ್ ಮಾಡ್ತಾರೆ. ಸೂರಿ ಅವರಿಗೆ ಅವರದ್ದೇ ಅಂತ ಪ್ರೇಕ್ಷಕ ವರ್ಗವಿದೆ. ಹೀಗಾಗಿ ಅವರ ಜೊತೆ ಸಿನಿಮಾ ಮಾಡಿರೋದು ಬಹಳ ಖುಷಿ ಇದೆ. ಸಿನಿಮಾ ಟ್ರೇಲರ್ ನೋಡಿದ ಮೇಲೆ ಕೆಲವರು ಅಭಿಯಲ್ಲಿ ಅಂಬರೀಶ್ ಅವರನ್ನ ಕಾಣ್ತೀದಿವಿ ಅಂತೀದಾರೆ ಎಂದರು.
ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ. ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ಸಿನಿಮಾ ಅಂದ್ರೆ ದುಡ್ಡು ಕೊಟ್ಟು ಬರ್ತಾರೆ, ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನು ಕರಿಬೇಕು. ನಮ್ಮ ತಾಯಿ ರಾಜಕೀಯದಲ್ಲಿ ಇರುವವರೆಗೂ ನಾನು ರಾಜಕೀಯಕ್ಕೆ ಬರೋಲ್ಲ. ನಮ್ಮ ತಂದೆಯವರು 30 ವರ್ಷಕ್ಕೂ ಹೆಚ್ಚು ವರ್ಷ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ ಮೇಲೆ ರಾಜಕೀಯ ರಂಗಕ್ಕೆ ಬಂದ್ರು. ನಾನು ಕೂಡ ಎರಡು ದೋಣಿ ಮೇಲೆ ಕಾಲು ಇಡಲು ಇಷ್ಟಪಡುವುದಿಲ್ಲ ಎಂದು ಹೇಳಿದರು.