ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹುಬ್ಬಳ್ಳಿ: ಕರ್ನಾಟಕದಲ್ಲಿ 40 ಪರ್ಸೆಂಟೇಜ್ ಸರ್ಕಾರವಿದೆ. ತಾವು 40 ಪರ್ಸೆಂಟ್ ಸರ್ಕಾರ ಎನ್ನುವುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ. ಕರ್ನಾಟಕದಲ್ಲಿರುವ 40 ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಗೆಯಬೇಕು. ಆ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವನ್ನು ಬಲವರ್ಧನೆ ಮಾಡುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಶುಕ್ರವಾರ ತಡರಾತ್ರಿ ರಾಜ್ಯಕ್ಕೆ ಆಗಮಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಗರದ ಖಾಸಗಿ ಹೋಟೆಲ್ನಲ್ಲಿ ದಾವಣಗೆರೆಗೆ ತೆರಳುವ ಮುನ್ನ ಮಾತನಾಡಿ, ದೆಹಲಿಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾವ ರೀತಿಯ ಬದಲಾವಣೆಗಳಾಗಿವೆ ಎಂಬುದು ಅಂತ ಜನರಿಗೆ ಗೊತ್ತಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಕೊಟ್ಟಂತೆ ಕರ್ನಾಟಕದಲ್ಲಿಯೂ ಪ್ರಾಮಾಣಿಕ ಸರ್ಕಾರವನ್ನು ನಾವು ನಡೆಸುತ್ತೇವೆ. ಆ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವನ್ನು ಬಲವರ್ಧನೆ ಮಾಡ್ತೇವೆ ಎಂದರು.
ದೆಹಲಿ ಮುಖ್ಯಮಂತ್ರಿ ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೂ ರಾಜ್ಯಕ್ಕೆ ಆಗಮಿಸಿದ್ದು, ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈತರು ಯಾವ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೋ ಅದೇ ರೀತಿಯ ಸಮಸ್ಯೆಗಳು ಪಂಜಾಬ್ನಲ್ಲಿವೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಾಯ್ದೆಗಳನ್ನು ವಾಪಸ್ ಪಡೆದಿಲ್ಲ. ಇಲ್ಲಿನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿದರು.
ಪಂಜಾಬ್ ರಾಜ್ಯದಲ್ಲಿ ನಾವು ಓಪಿಎಸ್ ಜಾರಿಗೆ ತಂದಿದ್ದೇವೆ. ಆದರೆ ಕರ್ನಾಟಕದಲ್ಲಿ ಇನ್ನೂ ಒಪಿಎಸ್ ಜಾರಿಗೆ ತಂದಿಲ್ಲ. ಕರ್ನಾಟಕದ ರೈತರ ಸಮಸ್ಯೆಗಳನ್ನು ಆಮ್ ಆದ್ಮಿ ಪಕ್ಷ ಬಗೆಹರಿಸುತ್ತದೆ. ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ತರುತ್ತೇವೆ. ರಾಜ್ಯದ ಜನರಿಗೆ ಉಚಿತ ವಿದ್ಯುತ್, ನಿರುದ್ಯೋಗ ಸಮಸ್ಯೆ ನಿವಾರಣೆ, ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಪಂಜಾಬ್ ಮತ್ತು ದೆಹಲಿ ಮಾದರಿಯಲ್ಲಿ ಇಲ್ಲಿಯ ಜನರೂ ಕೂಡ ಆಮ್ ಆದ್ಮಿ ಪಕ್ಷಕ್ಕೆ ಬಹುಮತ ನೀಡಿ, ಸರ್ಕಾರ ರಚಿಸುವ ಅವಕಾಶವನ್ನು ನೀಡಬೇಕು ಎಂದು ಹೇಳಿದರು.
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನದವರಿಂದ ಹಿಂದೂ ದೇವಸ್ಥಾನ ಧ್ವಂಸ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ನಾವು ಭ್ರಾತೃತ್ವ ಭಾವನೆಯಿಂದ ಎಲ್ಲರೂ ಜೊತೆಯಾಗಿ ಇದ್ದೇವೆ. ಇಲ್ಲಿ ಆ ರೀತಿ ಆಗಿಲ್ಲ. ಖಲಿಸ್ತಾನ ಪ್ರತ್ಯೇಕತೆ ಹೋರಾಟದ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದರು.
ದೆಹಲಿ, ಪಂಜಾಬ್ ನಂತರ ಕರ್ನಾಟಕದಲ್ಲಿ ಪಾರುಪತ್ಯ ಸಾಧಿಸಲು ರಾಜ್ಯಕ್ಕೆ ಭೇಟಿ ನೀಡಿರುವ ಅರವಿಂದ ಕೇಜ್ರಿವಾಲ್ ದಾವಣೆಗೆರೆಯಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ, ಯಾತ್ರೆಗೆ ಚಾಲನೆ ನೀಡಲಿದ್ದಾರೆ. ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಂಜೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ಭಾಗಿಯಾಗಲಿದ್ದಾರೆ. ಚುನಾವಣಾ ಯಾತ್ರೆಯನ್ನು ಆರಂಭಿಸುವುದಷ್ಟೇ ಅಲ್ಲದೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರಾಜ್ಯದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ಕೇಜ್ರಿವಾಲ್ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ: ಮುಖ್ಯಮಂತ್ರಿ ಚಂದ್ರು