ಹುಬ್ಬಳ್ಳಿ: ಹಾಡಹಗಲೇ ಮಹಿಳೆಯೊಬ್ಬಳನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಇಟ್ಟಿಗೆ, ಚಪ್ಪಲಿಯಿಂದ ಥಳಿಸಿದ ಘಟನೆ ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಗುರುವಾರ ನಡೆದಿದೆ. ಹಲ್ಲೆಗೊಳಗಾದ ಮಹಿಳೆ ಸುಮಾರು 10 ವರ್ಷಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮಹಿಳೆ ಮೇಲೆ ವ್ಯಕ್ತಿ ಸೇರಿದಂತೆ ಕೆಲ ಮಹಿಳೆಯರು ಹಲ್ಲೆ ನಡೆಸಿದ್ದು, ಕಾರಣ ಏನೆಂಬುದು ತಿಳಿದು ಬಂದಿಲ್ಲ. ವ್ಯಕ್ತಿಯ ಕುಟುಂಬಸ್ಥರೂ ಸೇರಿಕೊಂಡು ಮಹಿಳೆಗೆ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಮಹಿಳೆಯ ಸಹೋದರಿ ಮಧ್ಯ ಪ್ರವೇಶಿಸಿ ಬಿಡಿಸಲು ಬಂದಿದ್ದು, ಆಕೆಯ ಮೇಲೆಯೂ ಹಲ್ಲೆ ಮಾಡಲಾಗಿದೆ. ಈ ಘಟನೆಯ ವಿಡಿಯೋಗಳು ಈಗ ವೈರಲ್ ಆಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೊಲೀಸರು, ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಯೋಧನ ಮೇಲೆ ನಡೆದಿತ್ತು ಹಲ್ಲೆ:ಕುಂದಾನಗರಿ ಬೆಳಗಾವಿಯಲ್ಲಿ ಬಾರ್ ಎದುರು ನಿಂತಿದ್ದ ಸೈನಿಕನ ಮೇಲೆ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ಇತ್ತೀಚೆಗೆ ನಡೆದಿತ್ತು. ಸೈನಿಕನಿಗೆ ಕಿಡಿಗೇಡಿಗಳು ಮನಬಂದಂತೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಗಣೇಶಪುರದ ಕರುಣಾ ಬಾರ್ ಮುಂದೆ ಕ್ಷುಲ್ಲಕ ಕಾರಣಕ್ಕಾಗಿ ಯೋಧ ಮತ್ತು ಐದಾರು ಜನರ ಗುಂಪಿನ ನಡುವೆ ಜಗಳ ಶುರುವಾಗಿದೆ. ನೋಡ ನೋಡುತ್ತಿದ್ದಂತೆ ಆ ಗುಂಪು ಸೈನಿಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿ, ನಡು ರಸ್ತೆಯಲ್ಲಿ ಕೆಡವಿ ಹಲ್ಲೆ ಮಾಡಿದ್ದರು. ಸ್ಥಳಕ್ಕೆ ಕ್ಯಾಂಪ್ ಪೊಲೀಸರು ದೌಡಾಯಿಸುತ್ತಿದ್ದಂತೆ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದರು. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ:ಆನೇಕಲ್: ನಿವೇಶನ ವಿವಾದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆ