ಧಾರವಾಡ: ಕೊರೊನಾ ಕರಿನೆರಳಿನಿಂದ ಶಾಲೆಗಳಿಲ್ಲದೆ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಲಾಕ್ಡೌನ್ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ವಿನೂತನ ಯಂತ್ರ ಆವಿಷ್ಕಾರ ಮಾಡುವ ಮೂಲಕ ಇಲ್ಲೊಬ್ಬ ವಿದ್ಯಾರ್ಥಿ ಗಮನ ಸೆಳೆದಿದ್ದಾನೆ.
ಹೌದು, ಧಾರವಾಡದ ನವಲೂರ ಗ್ರಾಮದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಬಸವರಾಜ ಜಾಪಣ್ಣವರ ಎಂಬಾತ ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್‌ಚಾಲಿತ ಕಳೆ ಕತ್ತರಿಸುವ ಯಂತ್ರ ತಯಾರಿಸಿದ್ದಾನೆ. ಅಲ್ಯೂಮಿನಿಯಂ ಪೈಪ್, ಸೋಲಾರ್ ಪ್ಯಾನಲ್, ಸೈಕಲ್ ಟ್ಯೂಬ್ಲೆಸ್ ಚಕ್ರ, ಬ್ಯಾಟರಿ ಬಳಸಿಕೊಂಡು ಕೇವಲ 7 ಸಾವಿರ ರೂಪಾಯಿ ವೆಚ್ಚದಲ್ಲಿ ಮೇವು ಕಟಾವು ಯಂತ್ರ ಸಿದ್ಧಪಡಿಸಿದ್ದಾನೆ.
ಸೌರ ವಿದ್ಯುತ್‌ಚಾಲಿತ ಮೇವು ಕಟಾವು ಯಂತ್ರ ತಯಾರಿಸಿದ ವಿದ್ಯಾರ್ಥಿ ಈ ಯಂತ್ರದ ಮುಂದೆ ಮೇವು ಕತ್ತರಿಸುವ ಬ್ಲೇಡ್ ಅಳವಡಿಸಿದ್ದು, ಹಿಂಭಾಗದಲ್ಲಿ ಮೂರು ಬ್ಲೇಡ್ ಅಳವಡಿಸಿದ್ದಾನೆ. ಮುಂದಿರುವ ಬ್ಲೇಡ್ಗೆ ಶಕ್ತಿ ಕೊಡಲು ಮೇಲುಗಡೆ ಸೋಲಾರ್ ಪ್ಯಾನಲ್ ಅಳವಡಿಸಿದ್ದು, ಅದನ್ನು ಬ್ಯಾಟರಿಗೆ ಜೋಡಿಸಿದ್ದಾನೆ. ಬ್ಯಾಟರಿ ಮೂಲಕವೇ ಬ್ಲೇಡ್ಗಳನ್ನು ತಿರುಗಿಸುತ್ತ ಮೋಟಾರ್ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಯ ಈ ಸಾಧನೆಗೆ ಶಿಕ್ಷಕರು ಹಾಗೂ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸಹಾಯ ಮಾಡಿದೆ.
ಒಟ್ಟಿನಲ್ಲಿ ಸಂಕಷ್ಟ ಮತ್ತು ಸಾಧನೆ ಎರಡೂ ಒಂದೇ ನಾಣ್ಯದ ಭಿನ್ನ ಮುಖವಿದ್ದಂತೆ. ಚಿಕ್ಕ ವಯಸ್ಸಿನಲ್ಲೇ ಯಂತ್ರ ಆವಿಷ್ಕಾರ ಮಾಡಿ ಮಾದರಿಯಾಗಿರುವ ಈ ವಿದ್ಯಾರ್ಥಿ ಇತರರಿಗೆ ಪ್ರೇರಕ ಶಕ್ತಿ.