ಕರ್ನಾಟಕ

karnataka

ETV Bharat / state

ಆನ್​ಲೈನ್​ ಟ್ರೇಡಿಂಗ್​ ಲಾಭದ ಆಮಿಷ; ₹1 ಕೋಟಿಗೂ ಹೆಚ್ಚು ವಂಚನೆಗೊಳಗಾದ ವ್ಯಕ್ತಿ - ಈಟಿವಿ ಭಾರತ ಕನ್ನಡ

ಆನ್​ಲೈನ್​ ಟ್ರೇಡಿಂಗ್​ನಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ, ವ್ಯಕ್ತಿಯೊಬ್ಬರಿಂದ 1 ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

A person lost more than 1 crore due to online trading
ಹುಬ್ಬಳ್ಳಿ: ಆನ್​ಲೈನ್​ ಟ್ರೇಡಿಂಗ್​ ಆಸೆಗೆ ಬಿದ್ದು ₹1 ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ವ್ಯಕ್ತಿ

By ETV Bharat Karnataka Team

Published : Dec 23, 2023, 6:33 PM IST

Updated : Dec 23, 2023, 11:00 PM IST

ಹುಬ್ಬಳ್ಳಿ: ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೇಡಿಂಗ್ ಖಾತೆ ತೆರೆದು ಹೆಚ್ಚು ಲಾಭ ಗಳಿಸಬಹುದು ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ 1.03 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಗೋಕುಲ್‌ ರಸ್ತೆಯ ಲಕ್ಷ್ಮೀನಗರದ ಅರುಣ ಗಲಗಲಿ ಎಂಬವರು ವಂಚನೆಗೊಳಗಾದವರು.

ಇವರಿಗೆ ಅಕ್ಟೋಬರ್​ 24ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಟ್ರೇಡನ್ ಫಾರೆಕ್ಸ್ ಟ್ರೋಕರ್​ನ ರವಿ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 5 ಸಾವಿರ ರೂಪಾಯಿ ಸಂದಾಯ ಮಾಡಿದರೆ, ಹೆಚ್ಚು ಹಣ ಗಳಿಸಬಹುದು ಎಂದು ಹೇಳಿದ್ದಾನೆ. ನಂತರ ಕ್ರೆಡಿನಟೈಲ್ ನೀಡಿ ಮಾಹಿತಿ ಬಳಸಿ ಆನ್‌ಲೈನ್ ಅಪ್ಲಿಕೇಶನ್​ನಲ್ಲಿ ಖಾತೆ ತೆರೆಯಲು ಹೇಳಿದ್ದಾನೆ.

ಇದಾದ ಬಳಿಕ ವ್ಯಾಟ್ಸ್‌ಆ್ಯಪ್​ಗೆ ಕರೆ ಮಾಡಿದ ಮತ್ತೊಬ್ಬ, ಆನ್‌ಲೈನ್ ಅಪ್ಲಿಕೇಶನ್​ನಲ್ಲಿ ಹಣ ಜಮಾ ಆದಂತೆ ತೋರಿಸಿದ್ದಾನೆ. ಆರಂಭದಲ್ಲಿ ಟ್ರೇಡಿಂಗ್ ಪ್ಲಾಟ್​ಫಾರ್ಮ್‌ನಿಂದ ಹಣ ವಿಥ್​ಡ್ರಾ ಹೇಗೆ ಮಾಡುವುದು ಎಂದು ತಿಳಿಸಿ ಅರುಣ ಅವರ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ವರ್ಗಾಯಿಸಿದ್ದಾನೆ. ನಂತರ ಹೆಚ್ಚು ಹಣ ಹೂಡಿಕೆ ಮಾಡುವಂತೆ ಹೇಳಿ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 58,25,046 ರೂಪಾಯಿ ಹಾಗೂ ಯೆಸ್ ಬ್ಯಾಂಕ್ ಖಾತೆಯಿಂದ 45,06,200 ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆ: ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಾವತಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ್ದ ಇಬ್ಬರು ವಂಚಕರನ್ನು ಇತ್ತೀಚೆಗೆ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಪ್ರದೀಪ್ ಹಾಗೂ ವಸಂತ್ ಕುಮಾರ್ ಬಂಧಿತ ಆರೋಪಿಗಳು.

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಮ್ಯ ಇಂಟರ್ ನ್ಯಾಷನಲ್ ಕಂಪನಿಯನ್ನು ಪ್ರದೀಪ್ ಹಾಗೂ ಪತ್ನಿ ಸೌಮ್ಯ ತೆರೆದಿದ್ದರು. ಅದೇ ಹೆಸರಿನಲ್ಲಿ ವೆಬ್​​ಸೈಟ್ ಸಹ ತೆರೆದಿದ್ದರು. 2021ರಿಂದ ವೆಬ್​​ಸೈಟ್​​ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಜಾಹೀರಾತು ನೀಡಿದ್ದರು‌. ಅಲ್ಲದೇ ಕೆಲಸ ನಮ್ಮದು ಹಣ ನಿಮ್ಮದು.. ತಿಂಗಳಿಗೆ ನಿಮ್ಮ ಹಣಕ್ಕೆ 2.5 ರಷ್ಟು ಬಡ್ಡಿ ನೀಡುವುದಾಗಿ ಜಾಹೀರಾತಿನಲ್ಲಿ‌‌ ಪ್ರಕಟಿಸಿದ್ದರು.‌

5 ಸಾವಿರ ಹಣ ಹೂಡಿದರೆ ತಿಂಗಳಿಗೆ 2 ರಷ್ಟು ಹಾಗೂ ದೊಡ್ಡ ಮಟ್ಟದಲ್ಲಿ ಹಣ ಠೇವಣಿ ಇರಿಸಿದರೆ ಶೇ. 30 ರಷ್ಟು ಬಡ್ಡಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಜಾಹೀರಾತು ಕಂಡು ಸಾರ್ವಜನಿಕರು ಹಣ ಹೂಡಿಕೆ‌ ಮಾಡಿದ್ದರು‌. ಇದುವರೆಗೂ 700ಕ್ಕೂ ಹೆಚ್ಚು ಜನರಿಂದ ಸುಮಾರು 25 ಕೋಟಿ ಹಣ ಕಟ್ಟಿಸಿಕೊಂಡಿದ್ದರು ಎಂದು ಪೊಲೀಸರು ಪ್ರಕಟಣೆ ಮೂಲಕ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:ನಿವೇಶನದ ನಕಲಿ ದಾಖಲಾತಿ ಸೃಷ್ಟಿಸಿ ₹3 ಕೋಟಿ ಸಾಲ ಪಡೆದು ವೃದ್ಧೆಗೆ ವಂಚನೆ, ಐವರು ಸಿಸಿಬಿ ಬಲೆಗೆ

Last Updated : Dec 23, 2023, 11:00 PM IST

ABOUT THE AUTHOR

...view details