ಹುಬ್ಬಳ್ಳಿ:ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳಲ್ಲಿ ಪ್ರಾರಂಭವಾದ ಬಿಆರ್ಟಿಎಸ್ ಯೋಜನೆ ಕೋಟಿ ರೂಪಾಯಿ ವೆಚ್ಚದ್ದಾಗಿದ್ದು, ಬಹು ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಪ್ರಸ್ತುತ ಅದರಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾದಂತಾಗಿದೆ.
ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಿಆರ್ಟಿಎಸ್ ಯೋಜನೆಯ ಅವ್ಯವಸ್ಥೆ! ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ತ್ವರಿತ ಬಸ್ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿಆರ್ಟಿಎಸ್ ನಿರ್ಮಾಣ ಮಾಡಲಾಗಿದೆ. ಆದರೆ, ಮೊದಲನೆಯದಾಗಿ ಇದು ಅಂದುಕೊಂಡ ರೀತಿಯಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿಲ್ಲ. ಕೆಲವೊಂದು ಚಿಗರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ ಲಿಫ್ಟ್, ಮೇಲ್ಸೇತುವೆ, ಅಂಡರ್ ಪಾಸ್, ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ, ಅವುಗಳ ಉಪಯೋಗ ಮಾತ್ರ ಶೂನ್ಯ. ಇದಕ್ಕಾಗಿಯೇ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅವುಗಳು ಬಳಕೆಯಾಗದೇ ವ್ಯರ್ಥವಾಗುತ್ತಿರುವ ಆರೋಪ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ಬಿಆರ್ಟಿಎಸ್ ಆಡಳಿತ ಮಂಡಳಿ ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ.
ಇನ್ನೂ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ ಹಾಗೂ ಬಸ್ ನಿಲ್ದಾಣಕ್ಕೆ ಬರಲು ಅನುಕೂಲವಾಗಲಿ ಎಂದು ಹುಬ್ಬಳ್ಳಿಯ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ, ಉಣಕಲ್ಲ ಕ್ರಾಸ್, ಉಣಕಲ್ಲ ಕೆರೆ ಬಳಿ, ನವನಗರ, ರಾಯಾಪುರ ಇಸ್ಕಾನ್ ದೇವಸ್ಥಾನ , ಎಸ್ಡಿಎಂ ಆಸ್ಪತ್ರೆ ಬಳಿ ಎಫ್ಓಬಿ ನಿರ್ಮಿಸಿ ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಆದರೆ, ಲಿಫ್ಟ್ ಆಪರೇಟರ್ ಇರದ ಕಾರಣ ಅದರ ಅರಿವಿಲ್ಲದ ಜನ ಸಾಮಾನ್ಯರು ಲಿಫ್ಟ್ ಬಳಸದೇ ರಸ್ತೆ ದಾಟಿ ಬಸ್ ನಿಲ್ದಾಣ ಮುಟ್ಟುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ನಡೆದು ಹೋಗಬೇಕಾದರೆ ಸುತ್ತು ಬಳಸಿ ಹೋಗಬೇಕಿದ್ದು, ಇದಕ್ಕೆ 5-10 ನಿಮಿಷ ಬೇಕಾಗುತ್ತದೆ. ವೃದ್ಧರು, ಮಹಿಳೆಯರು ನಡೆದು ಹೋಗುವುದು ತುಂಬಾ ಕಷ್ಟಕರವಾಗಿದೆ. ಅಲ್ಲದೆ, ಹಲವಾರು ಅಪಘಾತಗಳು ಸಹ ಈಗಾಗಲೇ ಜರುಗಿವೆ.
ಒಟ್ಟಿನಲ್ಲಿ ಬಹು ನಿರೀಕ್ಷೆ ಹುಟ್ಟಿಸಿದ್ದ ಸಾವಿರಾರು ಕೋಟಿ ವೆಚ್ಚದ ಬಿಆರ್ಟಿಎಸ್ ಯೋಜನೆಯು ಜನಸಾಮಾನ್ಯರ ಬಳಕೆಗೆ ಬಾರದೆ ಉಳಿದಿದೆ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಿ ಅವ್ಯವಸ್ಥೆ ಸರಿಪಡಿಸಿ ಅನುಕೂಲ ಮಾಡಿಕೊಡಬೇಕಾಗಿದೆ.