ಹುಬ್ಬಳ್ಳಿ:ಹೆಂಡತಿಯನ್ನು ತನ್ನ ಜೊತೆಗೆ ಕಳುಹಿಸಲು ನಿರಾಕರಿಸಿದನೆಂದು ಸಿಟ್ಟಿಗೆದ್ದ ಅಳಿಯ ಮಾವನ ಕತ್ತು ಸೀಳಿದ ಘಟನೆ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ದಳವಾಯಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪತ್ನಿಯನ್ನು ಕಳುಹಿಸಲು ಒಲ್ಲೆ ಎಂದ ಮಾವ; ಕೋಪಗೊಂಡು ಬ್ಲೇಡ್ನಿಂದ ಕತ್ತು ಸೀಳಿದ ಅಳಿಯ - ಹುಬ್ಬಳ್ಳಿ ಶಿವಪ್ಪ ದಳವಾಯಿ ಸುದ್ದಿ
ತವರು ಮನೆಗೆ ಸೇರಿದ್ದ ಹೆಂಡತಿಯನ್ನು ಕಳುಹಿಸಲು ನಿರಾಕರಿಸಿದ ಎಂದು ಸಿಟ್ಟಿಗೆದ್ದ ಅಳಿಯ ಮಾವನ ಕತ್ತು ಸೀಳಿದ್ದಾನೆ. ಗಾಯಾಳು ವ್ಯಕ್ತಿಯನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜಗದೀಶ್ ಕಂಬಳಿ ಎಂಬಾತನಿಗೆ ಶಿವಪ್ಪ ದಳವಾಯಿಯ ಮಗಳನ್ನು ಮದುವೆ ಮಾಡಿಕೊಟ್ಟಿದ್ದ. ಆದರೆ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯಿಂದ ತವರು ಮನೆಗೆ ಬಂದಿದ್ದ ಪತ್ನಿಯನ್ನು ಜಗದೀಶ್ ಕರೆದುಕೊಂಡು ಹೋಗಲು ಗ್ರಾಮಕ್ಕೆ ಆಗಮಿಸಿದ್ದ. ಆದರೆ ಮಗಳನ್ನು ಕಳುಹಿಸಲು ಶಿವಪ್ಪ ನಿರಾಕರಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಆಗ ಸಿಟ್ಟಿಗೆದ್ದ ಜಗದೀಶ್ ಬ್ಲೇಡ್ನಿಂದ ದಾಳಿ ನಡೆಸಿದ್ದಾನೆ. ತಂದೆಯ ಜೀವ ಉಳಿಸಲು ಬಂದ ಮಗ ಪ್ರವೀಣ ದಳವಾಯಿಯ ಕುತ್ತಿಗೆಗೂ ಬ್ಲೇಡ್ನಿಂದ ಹಲ್ಲೆ ಮಾಡಿದ್ದಾನೆ.
ಘಟನೆಯ ಮಾಹಿತಿ ತಿಳಿದ ಅಣ್ಣಿಗೇರಿ ಠಾಣೆಯ ಪಿಎಸ್ಐ ಎಲ್.ಕೆ ಜೂಲಕಟ್ಟಿ ಆರೋಪಿ ಜಗದೀಶ್ ಕಂಬಳಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.