ಧಾರವಾಡ :ಹುಟ್ಟಿದ ಮಕ್ಕಳಿಗೆ ಪೂರ್ವಜರು ಅಥವಾ ದೇವರ ಹೆಸರಿಡುವುದು ಸಾಮಾನ್ಯ. ಆದರೆ, ಧಾರವಾಡದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಯ ಅಭಿಮಾನಿಯೊಬ್ಬರು ತಮ್ಮ ಮಗುವಿಗೆ ವಿನಯ್ ಎಂದು ನಾಮಕರಣ ಮಾಡಿದ್ದಾರೆ.
ಕುಲಕರ್ಣಿ ಜೈಲಿನಿಂದ ರಿಲೀಸ್ ಆದ ದಿನವೇ ಹುಟ್ಟಿದ ಮಗುವಿಗೆ ವಿನಯ್ ಎಂದು ಹೆಸರಿಟ್ಟ ಅಭಿಮಾನಿ.. ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಬಸವರಾಜ ಬೆಂಡಿಗೇರಿ ಎಂಬಾತ, ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಅಪ್ಪಟ ಅಭಿಮಾನಿ. ಬಸವರಾಜ ಅಷ್ಟೇ ಅಲ್ಲ, ಅವರ ಇಡೀ ಕುಟುಂಬ ವಿನಯ್ ಕುಲಕರ್ಣಿ ಅವರ ಅಭಿಮಾನಿಗಳಾಗಿದ್ದಾರೆ. ಸುಮಾರು 20-30 ವರ್ಷಗಳಿಂದ ವಿನಯ್ ಬೆಂಡಿಗೇರಿ ಕುಟುಂಬದ ಜೊತೆ ಕುಲಕರ್ಣಿ ಒಡನಾಟ ಹೊಂದಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ, ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಅವರು ಜಾಮೀನಿನ ಮೇಲೆ ಹೊರಗಡೆ ಬರುವ ದಿನವೇ ಬಸವರಾಜ ಬೆಂಡಿಗೇರಿ ಅವರ ಪತ್ನಿ 2ನೇ ಮಗುವಿಗೆ ಜನ್ಮ ನೀಡಿದ್ರು. ಈ ಹಿನ್ನೆಲೆ ಮಗುವಿಗೆ ವಿನಯ್ ಎಂದು ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ.
ಇದನ್ನೂ ಓದಿ: "ಜನ್ಮ ನೀಡಿದ ತಾಯಿಯೇ ನಿಮ್ಮ ದೇವರು: ಅಮ್ಮನ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರುವುದು ಸರಿಯಲ್ಲ...ಹೈಕೋರ್ಟ್
ಬೆಂಡಿಗೇರಿ ಕುಟುಂಬದ ಅಭಿಮಾನಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ತಮ್ಮ ಮೇಲಿನ ಅಭಿಮಾನ, ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮಾಜಿ ಸಚಿವರು.