ಹುಬ್ಬಳ್ಳಿ:ಸಂಚಾರ ನಿಮಯ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದಲ್ಲಿ ದಾಖಲೆಯ 73.31 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ. ಅರ್ಧದಷ್ಟು ದಂಡದ ಹಣ ಉಳಿತಾಯ ನಿಟ್ಟಿನಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಹನ ಮಾಲೀಕರು, ಸವಾರರು ಸಂಚಾರ ನಿಯಂತ್ರಣ ಕೊಠಡಿಗಳಲ್ಲಿ ಜಮಾಯಿಸಿದ್ದರು.
ಪೊಲೀಸ್ ಇಲಾಖೆಯು ಹಳೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ದಂಡ ತುಂಬಲು ಶೇ.50ರಷ್ಟು ರಿಯಾಯಿತಿಯನ್ನು ಫೆ.4ರಿಂದ 11ರವರೆಗೆ ನೀಡಲಾಗಿತ್ತು. ಇದಕ್ಕೆ ಶನಿವಾರ ಕೊನೆಯ ದಿನವಾಗಿತ್ತು. ಕರ್ನಾಟಕ ಒನ್, ಪೊಲೀಸ್ ಠಾಣೆ ಹಾಗೂ ಪಿಡಿಎ ಡಿವೈಸ್ ಯಂತ್ರದ ಮೂಲಕ ದಂಡ ಕಟ್ಟಲು ಅನುಕೂಲ ಮಾಡಿಕೊಡಲಾಗಿತ್ತು.
ಕೊನೆ ದಿನವೇ ಅಧಿಕ ದಂಡ ಪಾವತಿ:ದಂಡದರಿಯಾಯಿತಿಯನ್ನು ಜನರು ಸದುಪಯೋಗ ಪಡಿಸಿಕೊಂಡಿದ್ದು, ಹು-ಧಾ ಪೊಲೀಸ್ ಕಮಿಷನರೇಟ್ನಲ್ಲಿ ಒಟ್ಟಾರೆ73,31,925 ರೂಪಾಯಿ ದಂಡ ಪಾವತಿಯಾಗಿದೆ. ಅದರಲ್ಲೂ, ಕೊನೆ ಎರಡು ದಿನಗಳ ಕಾಲ ಹೆಚ್ಚಿನ ಪ್ರಮಾಣ ದಂಡ ವಸೂಲಿ ಆಗಿದೆ. ಫೆ.10ರಂದು 10,91,150 ರೂಪಾಯಿ ದಂಡ ಸಂಗ್ರಹವಾಗಿದ್ದು, ಫೆ.11ರಂದು ಅತೀ ಹೆಚ್ಚು ದಂಡ ಎಂದರೆ 25,61,175 ರೂಪಾಯಿ ಸಂಗ್ರಹಗೊಂಡಿದೆ.
57 ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಹನ ಸವಾರ, ಹಳೆ ಕೋರ್ಟ್ ಸರ್ಕಲ್ ಬಳಿಯ ನಿವಾಸಿ ಸೂರಜ್ ಠಾಕೂರ ಎಂಬಾತ ಒಬ್ಬನೇ ಬರೋಬ್ಬರಿ 28,500 ರೂಪಾಯಿ ದಂಡ ಪಾವತಿಸಬೇಕಿತ್ತು. ಆದರೆ, ರಿಯಾಯಿತಿ ದಂಡ ಪಾವತಿಯ ಅವಕಾಶವನ್ನು ಉಪಯೋಗಿಸಿಕೊಂಡು ಕೊನೆ ದಿನವಾದ ಶನಿವಾರ ಸೂರಾಜ್ 14,250 ದಂಡವನ್ನು ಕಟ್ಟಿದ್ದಾನೆ.