ಧಾರವಾಡ:ರೈತರೊಬ್ಬರು ತಮ್ಮ ಮಾವಿನ ಬೆಳೆಗೆ ವಿಮಾ ಸೌಲಭ್ಯ ಪಡೆಯಲು ಪಾವತಿಸಿದ್ದ ಪ್ರಿಮಿಯಂ ಹಣವನ್ನು ಅಗತ್ಯ ವಿವರಗಳೊಂದಿಗೆ ವಿಮಾ ಕಂಪನಿಗೆ ವರ್ಗಾಯಿಸದೇ ನಿರ್ಲಕ್ಷ್ಯ ತೋರಿದ ಕಲಘಟಗಿಯ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಇಲ್ಲಿನ ಜಿಲ್ಲ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 50 ಸಾವಿರ ರೂ ದಂಡ ವಿಧಿಸಿದೆ.
ಕಲಘಟಗಿ ತಾಲೂಕು ಯಲಿವಾಳ ಗ್ರಾಮದ ಕೃಷಿಕ ಬಸಪ್ಪ ಚೆನ್ನಪ್ಪ ಕಾಮಧೇನು ಎಂಬುವರು 2018-19ನೇ ಸಾಲಿನಲ್ಲಿ ತಮ್ಮ ಮಾವಿನ ಬೆಳೆಗೆ ವಿಮಾ ಸೌಲಭ್ಯ ಬಯಸಿ 3,399 ರೂ. ಪ್ರಿಮಿಯಂ ಅನ್ನು ಕಲಘಟಗಿಯ ಬ್ಯಾಂಕ್ ಆಫ್ ಬರೋಡಾದಲ್ಲಿ ಪಾವತಿಸಿದ್ದರು. ಬ್ಯಾಂಕ್ ವಿಮಾ ಕಂಪನಿಗೆ ಹಣದೊಂದಿಗೆ ರೈತನ ವಿವರಗಳನ್ನು ಕಳುಹಿಸದೇ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನ್ಯತೆ ಎಸಗಿದೆ ಎಂದು ಆಯೋಗದಲ್ಲಿ ದೂರು ದಾಖಲಿಸಿದ್ದರು.