ಹುಬ್ಬಳ್ಳಿ:''ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈಗಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ಸಂಚಾರ ದಟ್ಟಣೆ, ಅವಶ್ಯಕತೆ ಹಾಗೂ ಸಾಮರ್ಥ್ಯದ ಪರಿಮಿತಿಯನ್ನು ವಿಸ್ತರಿಸುವುದು'' ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
''ಹುಬ್ಬಳ್ಳಿ ನಿಲ್ದಾಣದ ಅಗತ್ಯಗಳನ್ನು 2026ರ ನಂತರದ ಸಂಚಾರ ದಟ್ಟಣೆಗೆ ಅನುಗುಣವಾಗಿ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಬೇಕು'' ಎಂದು ಅವರು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ ಸಾಮರ್ಥ್ಯ, ಗಾತ್ರ ಹಾಗೂ ಇತರ ಸೌಲಭ್ಯಗಳ ವಿಸ್ತರಣೆಗಾಗಿ ತಮ್ಮ ಕೋರಿಕೆಯ ಮೇರೆಗೆ ಈಗಾಗಲೇ ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ಈಗ ಒಟ್ಟು 324 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಕೊನೆಗೊಳ್ಳಲಿದೆ. ಡಿಸೆಂಬರ್ ಅಂತ್ಯದ ಒಳಗೆ ಕಾಮಗಾರಿ ಪ್ರಾರಂಭವಾಗುವುದು ಎಂದು ಪ್ರಹ್ಲಾದ ಜೋಶಿ ಮಾಹಿತಿ ನೀಡಿದ್ದಾರೆ.