ಧಾರವಾಡ :ಪುನೀತ್ ರಾಜ್ ಕುಮಾರ್ ಅಭಿಮಾನಿಯೋರ್ವಳು 500 ಕಿಲೋಮೀಟರ್ ಓಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿದ್ದಾರೆ. ಈ ಗೃಹಿಣಿ ಮೂರು ಮಕ್ಕಳ ತಾಯಿ ಎನ್ನುವುದು ವಿಶೇಷ.
ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಉಮೇಶ್ ಪಾಟೀಲ್ ಎಂಬ ಗೃಹಿಣಿ ಪುನೀತ್ ಮೇಲಿನ ಅಭಿಮಾನಕ್ಕೆ ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಅಪ್ಪು ಸಮಾಧಿವರೆಗೂ ಓಟಕ್ಕೆ ಮುಂದಾಗಿದ್ದಾರೆ.
500 ಕಿಲೋಮೀಟರ್ ಓಟಕ್ಕೆ ಮುಂದಾದ ಪುನೀತ್ ಆಭಿಮಾನಿ ದ್ರಾಕ್ಷಾಯಿಣಿ ಬಾಲ್ಯದಿಂದಲೂ ಪುನೀತ್ ಅವರ ಅಭಿಮಾನಿಯಾಗಿದ್ದಾರೆ. ಪುನೀತ್ ಅವರ ನಿಧನದಿಂದ ಬಹಳಷ್ಟು ದುಃಖ ಪಟ್ಟಿದ್ದಾರಂತೆ.
ಬಾಲ್ಯದಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ದ್ರಾಕ್ಷಾಯಿಣಿ ಅವರಿಗೆ, ರನ್ನಿಂಗ್ ಅನುಭವವಿದೆ. ಹೀಗಾಗಿ, ಅವರ ಮೇಲಿನ ಅಭಿಮಾನವನ್ನು ಸಮಾಧಿವರೆಗೂ ಓಡಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ವ್ಯಕ್ತಪಡಿಸಲು ಮುಂದಾಗಿದ್ದಾರೆ.
ನಾಳೆಯಿಂದ ಪ್ರಾರಂಭವಾಗುವ ದ್ರಾಕ್ಷಾಯಿಣಿ ಓಟ ಸುಮಾರು 13 ದಿನಗಳವರೆಗೆ ನಡೆಯುವ ಸಾಧ್ಯತೆಯಿದೆ. ಒಂದು ದಿನಕ್ಕೆ 35-40 ಕಿಲೋ ಮೀಟರ್ ಓಡುವ ಇರಾದೆಯಲ್ಲಿದ್ದಾರೆ. ಅವರ ತಾಯಿ, ಗಂಡ ಹಾಗೂ ಆಕೆಯ ಮೂವರು ಮಕ್ಕಳು ಸಹ ಇವರ ಜೊತೆಯಲ್ಲಿ ವಾಹನದಲ್ಲಿ ಹಿಂಬಾಲಿಸಲಿದ್ದಾರೆ.
ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋವರೆಗೆ ಓಡಿ ಶ್ರದ್ಧಾಂಜಲಿ ಸಲ್ಲಿಸುವ ಇಚ್ಛೆ ಹೊಂದಿದ್ದಾರೆ. ಓಡುವುದು ಅಷ್ಟೇ ಅಲ್ಲದೇ ನೇತ್ರದಾನಕ್ಕೂ ಸಹ ದ್ರಾಕ್ಷಾಯಿಣಿ ಮುಂದಾಗಿರುವುದು ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ.