ಕರ್ನಾಟಕ

karnataka

ETV Bharat / state

ಹುಬ್ಬಳಿಯಿಂದ ಕೆಎಸ್​ಆರ್​ಟಿಸಿ ಬಸ್​ ಮೂಲಕ ತವರಿಗೆ ತೆರಳಿದ ರಾಜಸ್ಥಾನದ 23 ಮಂದಿ - Hubli latest news

ಸೇವಾ ಸಿಂಧು ವೆಬ್​​ಸೈಟ್ ಮೂಲಕ ಅರ್ಜಿ ಸಲ್ಲಿಸಿ ಇ-ಪಾಸ್ ಪಡೆದಿದ್ದ ರಾಜಸ್ಥಾನ ಮೂಲದ 23 ವಲಸಿಗರು ವಾಕರಸಾ ಸಂಸ್ಥೆಯ ಬಸ್​ನಲ್ಲಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ತವರಿನತ್ತ ಪ್ರಯಾಣ ಬೆಳೆಸಿದರು.

ಕೆಎಸ್​ಆರ್​ಟಿಸಿ ಬಸ್​ ಮೂಲಕ ತವರಿಗೆ ತೆರಳಿದ ರಾಜಸ್ಥಾನದ 23 ಮಂದಿ
ಕೆಎಸ್​ಆರ್​ಟಿಸಿ ಬಸ್​ ಮೂಲಕ ತವರಿಗೆ ತೆರಳಿದ ರಾಜಸ್ಥಾನದ 23 ಮಂದಿ

By

Published : May 10, 2020, 11:28 PM IST

ಹುಬ್ಬಳ್ಳಿ: ಲಾಕ್​​ಡೌನ್ ಹಿನ್ನೆಲೆ ನಗರದಲ್ಲಿ ಸಿಲುಕಿಕೊಂಡಿದ್ದ ರಾಜಸ್ಥಾನ ಮೂಲದ 23 ವಲಸಿಗರು ವಾಕರಸಾ ಸಂಸ್ಥೆಯ ಬಸ್​ನಲ್ಲಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ತವರಿನತ್ತ ಪ್ರಯಾಣ ಬೆಳೆಸಿದರು.

ಇವರೆಲ್ಲರೂ ರಾಜಸ್ಥಾನದ ವಿವಿಧ ಜಿಲ್ಲೆಯವರಾಗಿದ್ದು, ಕೆಲಸದ ನಿಮಿತ್ತ ಹಲವಾರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಇಲ್ಲಿಂದ ತಮ್ಮ ಮೂಲ ಸ್ಥಳಗಳಿಗೆ ತೆರಳಲು ಸೇವಾ ಸಿಂಧು ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಿ ಇ-ಪಾಸ್ ಪಡೆದಿದ್ದರು. ಇಂದು ಜಿಲ್ಲಾಡಳಿತದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಾಕರಸಾ ಸಂಸ್ಥೆಯ ಕರಾರು ಒಪ್ಪಂದದ ಬಸ್​ನಲ್ಲಿ ತವರು ರಾಜ್ಯಕ್ಕೆ ತೆರಳಿದ್ದಾರೆ.

ಮಾರ್ಗದುದ್ದಕ್ಕೂ ಸುಮಾರು 3,500 ಕಿ.ಮೀ.ಗಳಷ್ಟು ಕ್ರಮಿಸಬೇಕಾಗಿದ್ದರಿಂದ ತಾಂತ್ರಿಕವಾಗಿ ಸುಸಜ್ಜಿತವಾಗಿರುವ ಹೊಸ ಬಸ್​ ಆಯ್ಕೆ ಮಾಡಿ ಮಾರ್ಗ ಮಧ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಹೆಚ್ಚುವರಿ ಟೈರ್, ಟೂಲ್ಸ್​​ಗಳನ್ನು ನೀಡಲಾಗಿದೆ. ಮಾರ್ಗದ ಬಗ್ಗೆ ಮಾಹಿತಿ ಇರುವ ಹಾಗೂ ಹಿಂದಿ ಭಾಷೆ ಬಲ್ಲಂತಹ ಇಬ್ಬರು ಅನುಭವಿ ಸುರಕ್ಷಾ ಚಾಲಕರನ್ನು ನಿಯೋಜಿಸಲಾಗಿದೆ. ಬಸ್​ನ ಒಳಭಾಗ ಮತ್ತು ಹೊರ ಭಾಗವನ್ನು ಸಂಪೂರ್ಣವಾಗಿ ಡೆಟಾಲ್ ಮತ್ತು ಫಿನಾಯಿಲ್​ನಿಂದ ಸ್ವಚ್ಛಗೊಳಿಸಿ, ಸೋಡಿಯಂ ಹೈಪೊಕ್ಲೋರೈಡ್ ಮಿಶ್ರಿತ ರಾಸಾಯನಿಕ ಸಿಂಪಡಿಸಿ ಸುರಕ್ಷತೆ ಕಾಯ್ದುಕೊಳ್ಳಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ ಮೂಲಕ ತವರಿಗೆ ತೆರಳಿದ ರಾಜಸ್ಥಾನದ 23 ಮಂದಿ

ಎಲ್ಲಾ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಮಾಸ್ಕ್, ಕೈಗವಸು, ಸ್ಯಾನಿಟೈಸರ್ ನೀಡಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿರಂತರವಾಗಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸುವ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಮಾರ್ಗ ಮಧ್ಯದ ಅವಶ್ಯಕತೆಗೆ ತಕ್ಕಂತೆ ಶುದ್ಧ ಕುಡಿಯುವ ನೀರು, ಆಹಾರ ಪೊಟ್ಟಣಗಳ ವ್ಯವಸ್ಥೆ ಮಾಡಲಾಗಿದೆ.

ಹುಬ್ಬಳ್ಳಿಯಿಂದ ಇದುವರೆಗೆ 6 ಬಸ್​ಗಳ ಮೂಲಕ ಒಟ್ಟು 145 ಜನರು ನಗರದಿಂದ ರಾಜಸ್ಥಾನಕ್ಕೆ ತೆರಳಿದ್ದಾರೆ‌ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಉಳಿದುಕೊಂಡಿದ್ದು, ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರದ ನಿರ್ದೇಶನಗಳ ಪ್ರಕಾರ sevasindhu.karnataka.gov.in ವೆಬ್​ಸೈಟ್ ಮೂಲಕ ಅಧಿಕೃತ ಇ-ಪಾಸ್ ಪಡೆದುಕೊಳ್ಳಬೇಕಾಗಿರುತ್ತದೆ. ಅಗತ್ಯ ದಾಖಲಾತಿಗಳೊಂದಿಗೆ ಪ್ರಯಾಣದ ವೆಚ್ಚವನ್ನು ಭರಿಸುವ ಆಧಾರದಲ್ಲಿ ವಾಕರಸಾ ಸಂಸ್ಥೆಯ ಕರಾರು ಒಪ್ಪಂದದ ಬಸ್​ನಲ್ಲಿ ಪ್ರಯಾಣಿಸಹುದಾಗಿದೆ. ಪ್ರಯಾಣಿಕರ ಅಗತ್ಯಕ್ಕನುಗುಣವಾಗಿ ವೇಗದೂತ ವಾಯವ್ಯ ಸಾರಿಗೆ, ರಾಜಹಂಸ ಮತ್ತು ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್​ಗಳನ್ನು ನೀಡಲಾಗುತ್ತದೆ. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7760991663 / 9448631581 / 9686672236 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details