ಧಾರವಾಡ:ರಾಜ್ಯದಲ್ಲಿ ಜೂನ್ 21ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜುಲೈ 5ರವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ ಹೇಳಿದ್ದಾರೆ.
ಜುಲೈ 15ರಿಂದ 2021-22ನೇ ಶೈಕ್ಷಣಿಕ ವರ್ಷ ಆರಂಭ: ಸಚಿವ ಸುರೇಶ್ಕುಮಾರ್
18:47 March 01
ಜೂನ್ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿ, ಜುಲೈ 5ರವರೆಗೆ ನಡೆಯಲಿದೆ. ಜುಲೈ 15ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸುತ್ತೇವೆ. ಕಳೆದ ವರ್ಷದ ಪರೀಕ್ಷೆಗಿಂತ ಈ ವರ್ಷದ ಪರೀಕ್ಷೆಗಳು ಭಿನ್ನವಾಗಿರುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ ಹೇಳಿದ್ದಾರೆ.
ಧಾರವಾಡದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಂದು ವಿಷಯಕ್ಕೆ ಒಂದೊಂದು ದಿನ ಅಂತರ ಬಿಡಲಾಗಿದೆ. ತಿಂಗಳ ಹಿಂದೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಣೆ ಇದ್ದರೆ ಅರ್ಜಿ ಸಲ್ಲಿಸುವಂತೆ ಹೇಳಲಾಗಿದ್ದು, ಇದೀಗ ದಿನಾಂಕ ಮುಗಿದಿದೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಅಂತಿಮಗೊಳಿಸಿದ್ದೇವೆ. ಕಳೆದ ವರ್ಷದ ಪರೀಕ್ಷೆಗಿಂತ ಈ ವರ್ಷದ ಪರೀಕ್ಷೆಗಳು ಭಿನ್ನವಾಗಿರುತ್ತವೆ ಎಂದರು.
ಓದಿ:ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಜುಲೈ 15ರಿಂದ 2021-22ನೇ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತದೆ. ಜುಲೈ 5ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುತ್ತವೆ. ಹೀಗಾಗಿ ಜುಲೈ 15ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸುತ್ತೇವೆ. 1ರಿಂದ 5ನೇ ತರಗತಿ ಆರಂಭ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇನ್ನೊಂದು ವಾರ ತಡೆದು ತೀರ್ಮಾನ ಮಾಡುತ್ತೇವೆ. ಸಾಕಷ್ಟು ಜನ ತರಗತಿ ಆರಂಭಿಸಿ ಅಂತಾ ಕೇಳುತ್ತಿದ್ದಾರೆ. ನಾವೂ ಕೂಡ ಎಲ್ಲ ತಯಾರಿ ನಡೆಸಿದ್ವಿ ಎಲ್ಲ ಸರಿ ಇದ್ದಿದ್ರೆ ಇವತ್ತಿನಿಂದಲೇ ಆರಂಭಿಸಬಹುದಿತ್ತು. ಆದರೆ, ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲಿ 300 ನಿತ್ಯದ ಇದ್ದ ಕೇಸ್ ಇದ್ದು, ಈಗ 500 ದಾಟಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಇನ್ನೊಂದು ವಾರ ಕಾದು ನೋಡುತ್ತೇವೆ ಎಂದರು.