ಹುಬ್ಬಳ್ಳಿ:ಜಿಲ್ಲೆಯಲ್ಲಿ ಮೊದಲು 9 ಬೆಳೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸದ್ಯ 7 ಹೆಚ್ಚುವರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 16 ಕೇಂದ್ರಗಳು ರೈತರ ಬೆಳೆಗಳನ್ನು ಯೋಗ್ಯಬೆಲೆಯಲ್ಲಿ ಖರೀದಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮನೇನಕೊಪ್ಪ ಹೇಳಿದ್ದಾರೆ.
ರೈತರ ಬೆಳೆಗಳನ್ನು ವ್ಯವಸಾಯ ಸೇವಾ ಸಹಕಾರ ಸಂಸ್ಥೆಗೆ ನೀಡಿದರೆ, ನೇರವಾಗಿ ಅವರ ಖಾತೆಗೆ ಹಣ ನೀಡುವ ಅವಕಾಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿಕೊಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಪರವಾಗಿ ಹೆಸರು ಬೇಳೆ, ಹತ್ತಿ, ಮೆಕ್ಕೆಜೋಳ ಹಾಗೂ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡುತ್ತಿದೆ. ರೈತರ ಬೆಳೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದರೆ ಅಧಿಕಾರಿಗಳ ಹಾಗೂ ನಮ್ಮ ಗಮನಕ್ಕೆ ತರಬೇಕು ಎಂದರು.
ಸಚಿವ ಸಂಪುಟ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸುವಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದರು. ಅದರಂತೆ ಕ್ಯಾಬಿನೆಟ್ನಲ್ಲಿ ರೈತರ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಪ್ರಸ್ತಾಪ ಮಾಡಿದ್ದೇನೆ. ಎರಡು ದಿನಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹೆಸರು ಬೇಳೆ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.