ಧಾರವಾಡ:ಜಿಲ್ಲೆಯ ಎಲ್ಲಾ ಶಾಸಕರ ಆಸಕ್ತಿ ಮತ್ತು ಕಾಳಜಿಯಿಂದಾಗಿ ಎಲ್ಲಾ ಗ್ರಾಮಗಳಿಗೆ ಮಲಪ್ರಭಾ ನದಿ ಮೂಲದಿಂದ ಕುಡಿಯುವ ನೀರು ಪೂರೈಸಲು, 1500 ಕೋಟಿ ರೂ.ಗಳ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗಿದೆ. ಬರುವ ಜನವರಿಯಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಆಲೂರು ವೆಂಕಟರಾವ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಎಲ್ಲಾ ಹಳ್ಳಿಗಳಿಗೆ ನದಿ ಮೂಲದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರೂ ಕೂಡ ಒಪ್ಪಿಗೆ ನೀಡಿದ್ದಾರೆ. ರೈತರಿಗೆ ಕೃಷಿ ಸಾಲ ವಿತರಿಸುವ ವಿಧಾನವನ್ನು ರಾಷ್ಟ್ರೀಕೃತ ಬ್ಯಾಂಕುಗಳು ಸಾಧ್ಯವಾದಷ್ಟು ಸರಳೀಕರಣ ಮಾಡಬೇಕು. ಗ್ರಾಮೀಣ ಭಾಗಗಳ ರೈತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಾಲ ಪಡೆಯಲು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಚಿವರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಶಾಸಕ ಅಮೃತ ದೇಸಾಯಿ ಮಾತನಾಡಿ, ಈ ಬಾರಿ ತೇವಾಂಶ ಹೆಚ್ಚಿಗೆ ಇರುವುದರಿಂದ ಇದುವರೆಗೆ ಮಾವು ಬೆಳೆ ಹೂ ಬಿಟ್ಟಿಲ್ಲ. ರೈತರು ಆತಂಕದಲ್ಲಿದ್ದಾರೆ ಮಾವು ಬೆಳೆಗಾರರಿಗೆ ವಿಮಾ ಸೌಲಭ್ಯ ಪಡೆಯಲು ಹೆಚ್ಚು ಅರಿವು ಮೂಡಿಸಬೇಕು .ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ರೈತರು ಹೊಲಗಳಿಗೆ ತೆರಳಲು ತೊಂದರೆಯಾಗಿದೆ ಅವುಗಳನ್ನು ಸಂಚಾರಯೋಗ್ಯವಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಅಬೀದ್ ಮಾತನಾಡಿ, ಪ್ರಧಾನಮಂತ್ರಿ ಫಸಲ್ ವಿಮಾ ರೈತ ಸುರಕ್ಷಾ ಯೋಜನೆಯಡಿ 2019-20 ನೇ ಸಾಲಿನ ಹಿಂಗಾರು ಹಂಗಾಮಿಗೆ 1,29,447 ರೈತರು ಹಾಕಿ ಮುಂಗಾರು ಹಂಗಾಮಿಗೆ 1,05,170 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ್, ಉಪ ಪೊಲೀಸ್ ಆಯುಕ್ತ ಡಿ.ಎಲ್.ನಾಗೇಶ, ಪ್ರೊಬೆಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.