ಕರ್ನಾಟಕ

karnataka

ETV Bharat / state

ಕಠೋರವಾಗಿ ವರ್ತಿಸಿದ ವಿಧಿ: 11 ಸ್ನೇಹಿತೆಯರ ಹಣೆ ಬರಹದಲ್ಲಿ ಏನಿತ್ತೋ.... !? - dharwad crime news

ಧಾರವಾಡ ನಗರಕ್ಕೆ ಆಗಮಿಸಿ ಉಪಹಾರ ಸೇವಿಸಿ ಮುಂದೆ ಗೋವಾದತ್ತ ಪ್ರಯಾಣ ಬೆಳೆಸಲು ಮುಂದಾದ ಈ ಸ್ನೇಹಿತೆಯರ ಯೋಜನೆಯನ್ನು ವಿಧಿ ಅತ್ಯಂತ ಕಠೋರವಾಗಿ ವಿಫಲಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ 4ರ ಮೃತ್ಯುಕೂಪದಲ್ಲಿ ನಡೆದ ದುರ್ಘಟನೆ ಚಾಲಕ ಸೇರಿ 11 ಸ್ನೇಹಿತೆಯರ ಜೀವ ಅತ್ಯಂತ ದಾರುಣವಾಗಿ ಅಂತ್ಯವಾಗಿದೆ.

11 woman dies in accident at Dharwad
ಕಠೋರವಾಗಿ ವರ್ತಿಸಿದ ವಿಧಿ

By

Published : Jan 16, 2021, 12:34 AM IST

ಧಾರವಾಡ: ಪ್ರತಿ ವರ್ಷವೂ ಈ ತಂಡ ಇದೇ ಅವಧಿಯಲ್ಲಿ ಪ್ರವಾಸ ಕೈಗೊಳ್ಳುತ್ತಿತ್ತು. ಇಲ್ಲಿಯವರೆಗೂ ರಾಜ್ಯದ ಒಂದೊಂದು ಜಿಲ್ಲೆಗೂ ಭೇಟಿ ನೀಡುತ್ತಿದ್ದ ಈ ಸ್ನೇಹಿತೆಯರ ತಂಡ, ಇದೇ ಮೊದಲ ಬಾರಿಗೆ ಅಂತಾರಾಜ್ಯ ಪ್ರವಾಸ ಕೈಗೊಂಡಿತ್ತು. ಅಷ್ಟೇ ಅಲ್ಲ, 16 ಸ್ನೇಹಿತೆಯರಿದ್ದ ಈ ಗುಂಪು ಎಂದೂ ರಾತ್ರಿ ಪ್ರಯಾಣ ಬೆಳೆಸಿದ್ದೇ ಇಲ್ಲ. ಆದರೆ, ಎಲ್ಲರೂ ಮಾತನಾಡಿಕೊಂಡು ದಾವಣಗೆರೆ ಜಿಲ್ಲೆಯನ್ನು ನಸುಕಿನ ಜಾವ ಸುಮಾರು 3:30ಕ್ಕೆ ಬಿಟ್ಟಿದ್ದಾರೆ. ಆದರೆ ಜವರಾಯ ಈ ಸ್ನೇಹಿತೆಯರ ಸಂತಸ ಸಹಿಸದೆ ಸೀದಾ ಸಾವಿನ ಮನೆಗೆ ಕಳುಹಿಸಿಕೊಟ್ಟಿದ್ದಾನೆ.

ಸ್ನೇಹಿತೆಯರು

ಟಿಟಿ ಬಸ್ ಸಿಗದ ಕಾರಣ ಟೆಂಪೋ ಮೂಲಕ ಇವರು ದಾವಣಗೆರೆ ಬಿಟ್ಟಿದ್ದರು. ಬೆಂಗಳೂರಿನಿಂದ ವಿಮಾನದ ಮೂಲಕ ಗೋವಾಕ್ಕೆ ತೆರಳುವಂತೆ ಟೆಂಪೋ ಹತ್ತಿದ್ದ ಕುಚ್ಚಿಕ್ಕೋ ಸ್ನೇಹಿತೆಯರ ಬಳಗ, ಉಳಿದವರಿಗೂ ಸಕಾಲಕ್ಕೆ ಬರುವಂತೆ ಸೂಚಿಸಿದ್ದರು. ಟೆಂಪೋ ಹತ್ತಿದ್ದ ಸ್ನೇಹಿತೆಯರೆಲ್ಲರೂ ಸೇರಿ ಖುಷಿಯಲ್ಲಿ ಪ್ರವಾಸದ ಮೊದಲ ಸೆಲ್ಫಿ ತೆಗೆದುಕೊಂಡಿದ್ದರು. ಆದರೆ, ಅದೇ ಅವರ ಕೊನೆಯ ಸೆಲ್ಫಿಯಾಗಿತ್ತು ಅಂತ ಅವರು ಕನಸು ಮನಸಿನಲ್ಲೂ ಅಂದುಕೊಂಡಿರುವುದಕ್ಕೆ ಸಾಧ್ಯವಿಲ್ಲ.

ಧಾರವಾಡ ನಗರಕ್ಕೆ ಆಗಮಿಸಿ ಉಪಹಾರ ಸೇವಿಸಿ ಮುಂದೆ ಗೋವಾದತ್ತ ಪ್ರಯಾಣ ಬೆಳೆಸಲು ಮುಂದಾದ ಈ ಸ್ನೇಹಿತೆಯರ ಯೋಜನೆಯನ್ನು ವಿಧಿ ಅತ್ಯಂತ ಕಠೋರವಾಗಿ ವಿಫಲಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ 4ರ ಮೃತ್ಯುಕೂಪದಲ್ಲಿ ನಡೆದ ದುರ್ಘಟನೆ ಚಾಲಕ ಸೇರಿ 11 ಸ್ನೇಹಿತೆಯರ ಜೀವ ಅತ್ಯಂತ ದಾರುಣವಾಗಿ ಅಂತ್ಯವಾಗಿದೆ.

ಸಾವಿಗೀಡಾದವರೆಲ್ಲ ಬೆಣ್ಣೆ ನಗರಿ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ಹಾಗು ಎಂಸಿಸಿ ಎ ಬ್ಲಾಕ್ ಮತ್ತು ವಿದ್ಯಾನಗರದವರೆಂದು ತಿಳಿದುಬಂದಿದೆ. ಮೃತರನ್ನು ಡಾ.ವೀಣಾ ಪ್ರಕಾಶ್, ಮಂಜುಳಾ, ಶಕುಂತಲಾ, ಪ್ರವೀಣ್, ಹೇಮಲತಾ, ಪ್ರೀತಿ ರವಿಕುಮಾರ್, ರಾಜೇಶ್ವರಿ, ರಜನಿ, ಟೆಂಪೋ ಚಾಲಕ ಮಲ್ಲಿಕಾರ್ಜುನ್, ಯಶ್ಮಿತಾ, ಕ್ಷಿರಾ ಮೃತರೆಂದು ಗುರುತಿಸಲಾಗಿದೆ.

ಟೆಂಪೋ ಟ್ರಾವೆಲರ್​​​ನಲ್ಲಿ ಎರಡು ಸೀಟು ಖಾಲಿ ಇದೆ ಎಂದು ಪ್ರವಾಸಕ್ಕೆ ಸ್ನೇಹಿತೆಯರು ಕರೆದೊಯ್ದಿದ್ದ ತಾಯಿ-ಮಗಳನ್ನು ದುರ್ವಿಧಿ ಬಲಿ ಪಡೆದಿದೆ. ತಾಯಿ ಹೇಮಲತಾ ಹಾಗೂ ಮಗಳು ಯಶ್ಮಿತಾ ಇಬ್ಬರೂ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದೆರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ಫಾಸ್ಟ್ಯಾಗ್ ಮಾಡಿಸುವ ಮೂಲಕ ವಿಮೆ ಮಾಡಿಸಿಕೊಂಡಿದ್ದ ಅವರು, ಈಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಕೊನೆಯ ಚಿತ್ರ

ರಸ್ತೆ ಅಪಘಾತದಲ್ಲಿ ದುರಂತ ಸಾವಿಗೆ ಒಳಗಾದ ದಾವಣಗೆರೆಯ 11 ಸ್ನೇಹಿತರೂ 1980ರ ಬ್ಯಾಚ್​​​ನ ಸೆಂಟ್ ಫಾಲ್ಸ್ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಅಂದಿನಿಂದ ಈವರೆಗೂ ಇವರು ಯಾವುದೇ ಕೆಲಸವನ್ನಾದರೂ ಒಟ್ಟಿಗೇ ಮಾಡುತ್ತಿದ್ದರಂತೆ. ಪ್ರವಾಸ ಕೈಗೊಂಡರೆ ಒಬ್ಬರನ್ನೂ ಬಿಟ್ಟು ಹೋಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಜೊತೆಯಾಗಿದ್ದ 40 ವರ್ಷದ ಗೆಳೆತನ ಈಗ ಸಾವಿನಲ್ಲೂ ಒಂದಾಗಿದೆ.

ಪ್ರತಿ ವರ್ಷ ಸಂಕ್ರಾಂತಿಗೆ ಶಾಲಾ ವಲಯದ ಸ್ನೇಹಿತರೊಂದಿಗೆ ಒಂದೊಂದು ಕಡೆ ಇವರು ಪ್ರವಾಸಕ್ಕೆ ತೆರಳುತ್ತಿದ್ದರಂತೆ. ರಾಜ್ಯ ಬಿಟ್ಟು ಬೇರೆ ರಾಜ್ಯದ ಪ್ರವಾಸಿ ತಾಣಗಳಿಗೆ ತೆರಳದ ಇವರು, ಇದೇ ಮೊದಲ ಬಾರಿಗೆ ಹೊರ ರಾಜ್ಯವಾದ ಗೋವಾಕ್ಕೆ ಪ್ರವಾಸ ಕೈಗೊಂಡಿದ್ದರು. ಯಾವತ್ತೂ ರಾತ್ರಿ ಟ್ರಿಪ್‌ಗೆ ತೆರಳದ ಇವರ ಬದುಕನ್ನು ಮೊದಲ ರಾತ್ರಿಯ ಪ್ರಯಾಣದಲ್ಲೇ ವಿಧಿ ಬಲಿ ಪಡೆದುಕೊಂಡಿದ್ದು ಮಾತ್ರ ಘೋರ ದುರಂತ.

ABOUT THE AUTHOR

...view details