ಧಾರವಾಡ: ಜಿಲ್ಲೆಯಾದ್ಯಂತ ಅಗಸ್ಟ್ ತಿಂಗಳಾರಂಭದಿಂದ ಈವರೆಗೆ 482 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 7 ರಂದು ಜಿಲ್ಲೆಯಲ್ಲಿ ಒಟ್ಟು 338 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. 33 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. 305 ರೋಗಿಗಳು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಏಳು ದಿನಗಳಿಂದ ಶೇ. 11.09 ಪಾಸಿಟಿವಿಟಿ ದರವಿದೆ. ಲಸಿಕೆ ಮೂಲಕ ಸೋಂಕು ತಡೆಯಬಹುದು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತಕ್ಷಣ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಚಿಕಿತ್ಸೆಗೆ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ 3,425 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 1,902 ಆಮ್ಲಜನಕ ಪೂರೈಕೆ ಸೌಲಭ್ಯವುಳ್ಳ ಹಾಸಿಗೆಗಳು, 356 ಐಸಿಯು ಹಾಸಿಗೆಗಳು ಹಾಗೂ 195 ವೆಂಟಿಲೇಟರ್ ಸೌಲಭ್ಯವಿರುವ ಹಾಸಿಗೆಗಳು ಲಭ್ಯವಿರುತ್ತವೆ.
ಕೋವಿಡ್ ಲಸಿಕಾ ಕಾರ್ಯಕ್ರಮವೂ ಪ್ರಗತಿಯಲ್ಲಿದೆ. 18 ವರ್ಷದ ಮೇಲ್ಪಟ್ಟವರಿಗೆ 1ನೇ ಡೋಸಿನ 14,44,000 ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 15,08,467 ಲಸಿಕೆ ನೀಡಿ, ಪ್ರತಿಶತ 104.46 ಪ್ರಗತಿ ಸಾಧಿಸಲಾಗಿದೆ. 15,18,666 ಎರಡನೇ ಡೋಸಿನ ಲಸಿಕೆಯನ್ನು ನೀಡಿ ಪ್ರತಿಶತ 105.17 ಸಾಧನೆ ಮಾಡಲಾಗಿದೆ. ಶಾಲೆಗಳಲ್ಲಿ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿದೆ.