ಕಾಶ್ಮೀರದಲ್ಲಿ ಬೆಳೆಯುವ ಕೇಸರಿ ಬೆಣ್ಣೆನಗರಿಯಲ್ಲಿ ಬೆಳೆದ ಯುವಕ ದಾವಣಗೆರೆ: ಕೇಸರಿಯನ್ನು ಸಾಮಾನ್ಯವಾಗಿ ಕಣಿವೆಗಳ ರಾಜ್ಯ ಕಾಶ್ಮೀರದಲ್ಲಿ ಬೆಳೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದಾವಣಗೆರೆ ಯುವಕನೊಬ್ಬ ಕಾಶ್ಮೀರದಲ್ಲಿನ ಅದೇ ಹವಾಗುಣವನ್ನ ಮನೆಯಲ್ಲಿ ಸೃಷ್ಟಿಸಿ ಕೇಸರಿ ಬೆಳಯುವ ಮೂಕಲ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಹೌದು, ಕೇಸರಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೆ. ಅದ್ದರಿಂದ ಕೇಸರಿ ಬೆಳೆಯುವ ಕಸರತ್ತಿಗೆ ಕೈ ಹಾಕಿದ್ದಾನೆ ದಾವಣಗೆರೆ ತಾಲೂಕಿನ ದೊಡ್ಡ ಬಾತಿ ಗ್ರಾಮದ ಯುವಕ ಜಾಕೋಬ್ ಸತ್ಯರಾಜ್. ಮೊದಲು ಆಂಧ್ರಪ್ರದೇಶಕ್ಕೆ ತೆರಳಿ ಕೇಸರಿ ಬೆಳೆಗಾರರನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿದ ಯುವಕ, ಬಳಿಕ ಉರ್ದು ಭಾಷೆ ಬರುವ ಕೆಲ ಸ್ನೇಹಿತರನ್ನು ಕರೆದುಕೊಂಡು ಕಾಶ್ಮೀರಕ್ಕೆ ತೆರಳಿ ಕೆಲ ದಿನಗಳ ಕಾಲ ಅಲ್ಲಿಯೇ ನೆಲಸಿ, ಕೇಸರಿ ಬೆಳೆಯ ಬಗ್ಗೆ ತರಬೇತಿ ಪಡೆದು ಈಗ ತನ್ನ ಗ್ರಾಮದ ಮನೆಯ ಕೋಣೆಯೊಂದರಲ್ಲಿಯೇ ಕೇಸರಿ ಬೆಳೆಯುತ್ತಿದ್ದಾನೆ. ಇದಲ್ಲದೇ ಜಾಕೋಬ್ ಅವರು ಬೀದರ್ ಜಿಲ್ಲೆಯಲ್ಲಿ ಕೇಸರಿ ಬೆಳೆಯುತ್ತಿರುವ ಮಹಿಳೆಯೊಬ್ಬರ ಬಳಿಯಿಂದಲೂ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಮನೆಯ ಒಂದು ಕೋಣೆಯನ್ನು ಈ ಬೆಳೆಗೆ ಸೀಮಿತ ಮಾಡಿರುವ ಜಾಕೋಬ್ ಸತ್ಯರಾಜ್ ಅವರು ಸಾವಯವ ಗೊಬ್ಬರ ಹಾಗೂ ಪರೀಕ್ಷಿಸಿದ ಮಣ್ಣನು ಬಳಕೆ ಮಾಡಿ. ಎಸಿ ಹಾಕಿಸಿ ಬಿಸಿ ಗಾಳಿ ಒಳ ನುಸಳದಂತೆ ವ್ಯವಸ್ಥೆ ಮಾಡಿ ಕೇಸರಿ ಬೆಳೆಯುತ್ತಿದ್ದು, ಈಗಾಗಲೇ 20 ಗ್ರಾಂ ನಷ್ಟು ಕೇಸರಿ ಜಾಕೋಬ್ ರವರ ಕೈ ಸೇರಿದೆ. ಇನ್ನು ಜಾಕೋಬ್ ಹರಿಹರಕ್ಕೆ ಕುಡಿಯುವ ನೀರು ಪೂರೈಸುವ ಜಾಕ್ವೆಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.
ಜಾಕೋಬ್ ಸತ್ಯರಾಜ್ ಹೇಳಿದ್ದೇನು?:ಈ ಕುರಿತು ಕೇಸರಿ ಬೆಳೆಗಾರ ಜಾಕೋಬ್ ಸತ್ಯರಾಜ್ ಮಾತನಾಡಿ, " ಕೇಸರಿಯನ್ನು ಬೆಳೆಯಲೇ ಬೇಕೆಂದು ನಿರ್ಧಾರ ಮಾಡಿ ಆಂಧ್ರಪ್ರದೇಶದಕ್ಕೆ ಭೇಟಿ ಕೊಟ್ಟು ನೋಡಿಕೊಂಡು ಬಂದಿದ್ದೆವು. ಮೊದಲನೇ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದೇವೆ. ಸೀಡ್ಸ್ ಆಗಸ್ಟ್ನಿಂದ ಆರಂಭವಾಗಿ ಅಕ್ಟೋಬರ್, ನವೆಂಬರ್ನಲ್ಲಿ ಹೂವು ಬಿಡುತ್ತೆ. ನಂತರ ಹೂವಿನಿಂದ ಕೇಸರಿಯನ್ನು ಬೇರ್ಪಡಿಸಬೇಕು. ಸೀಡ್ಸ್ ಅನ್ನು 600 ರೂನಂತೆ 60 ಕೆಜಿ ತಂದಿದ್ದೆ. ಕಾಶ್ಮೀರದಿಂದ ದಾವಣಗೆರೆಗೆ ಪ್ರಯಾಣ ಮಾಡುವ ವೇಳೆ 15 ಕೆಜಿ ಸೀಡ್ಸ್ ಹಾಳಾಗಿದೆ. ಉಳಿದಿ 45 ಕೆಜಿ ಸೀಡ್ಸ್ನಿಂದ ಕೇಸರಿ ಬೆಳೆಯುತ್ತಿದ್ದೇನೆ" ಎಂದರು.
"ಕಾಶ್ಮೀರದ ನೆಲದಲ್ಲಿ ಕೇಸರಿಯನ್ನು ಬೆಳೆಯುತ್ತಾರೆ, ನಾನು ಒಂದು ಕೋಣೆಯಲ್ಲಿ ಆರ್ಟಿಫೀಷಿಯಲ್ ಆಗಿ ಬೆಳೆದಿದ್ದೇನೆ. ಎಸಿ ಹಾಕಿ ಒಂಬತ್ತು ಡಿಗ್ರಿ ಸೆಲ್ಸಿಯಸ್ ತಂಪು ವಾತಾವರಣದಲ್ಲಿ ಚಿಲ್ಲರ್ ಹಾಕಿ ತಂಪು ಹೊರಹೋಗದಂತೆ ಥರ್ಮಲ್ ಹಾಕಿ ಬಂದೋಬಸ್ತ್ ಮಾಡಿದ್ದೇವೆ. ಹೂವು ಬಿಡುವ ವೇಳೆ ಬೇರೆ ರೀತಿಯಲ್ಲೇ ಟೆಂಪ್ರೇಚರ್ ಕೊಡಬೇಕು. ಆಗಾ ಮಾತ್ರ ಬೆಳೆ ಬರಲು ಸಾಧ್ಯ. ಇಲ್ಲಿ ತನಕ ಈ ಬೆಳೆಗೆ ಒಟ್ಟು 3 ರಿಂದ 4 ಲಕ್ಷ ತನಕ ಖರ್ಚಾಗಿದ್ದು, ಕೇಸರಿ ಈಗಾಗಲೇ 20 ಗ್ರಾಂ ನಷ್ಟು ಕೈ ಸೇರಿದೆ. ಇನ್ನು ಹೆಚ್ಚಿನ ಫಸಲಿಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ. ಕೇಸರಿ ಬೆಲೆ ಅದು ಗ್ರೇಡ್ ಮೇಲೆ ನಿರ್ಧಾರವಾಗುತ್ತದೆ. ಎ ಗ್ರೇಡ್ ಕೇಸರಿ ಒಂದು ಗ್ರಾಂಗೆ 1200 ಬೆಲೆ ಇದೆ. ಇನ್ನು ನಾನು ಬೆಳೆದ ಕೇಸರಿಯನ್ನು ಮಾರಾಟ ಮಾಡಬೇಕಾಗಿದೆ. ಕೇಸರಿ ಬೆಳೆದಿರುವುದಕ್ಕೆ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆ ಬೆಳೆಯಬೇಕೆಂಬ ಆಸೆ ಇದೆ" ಎಂದು ತಿಳಿಸಿದರು.
ಕೇಸರಿ ಬೆಳೆಯುವುದು ಹೇಗೆ:ಕೇಸರಿಯ ಸೀಡ್ಸ್ನಲ್ಲಿ ಈ ವರ್ಷ ಹೂವು ಬಿಡುತ್ತಿದೆ ಎಂದರೆ ಬಲ್ಬ್ಸ್ನಲ್ಲಿ ಎಲ್ಲಾ ರೀತಿಯ ಪ್ರೋಟೀನ್ಗಳನ್ನು ಅದು ಹಿಡಿದಿಟ್ಟುಕೊಂಡಿರುತ್ತದೆ. ಇನ್ನು ಹೂವು ಬಿಡುವ ತನಕ ಬಲ್ಬ್ಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ. ಅದನ್ನು ತಂದು ಟ್ರೇನಲ್ಲಿ ಇಟ್ಟು ಇಮ್ಯುನಿಟಿ ಹಾಗೂ ಟೆಂಪ್ರೇಚರ್ ಕೊಟ್ಟರೆ ಹೂವು ಬಿಡುತ್ತದೆ. ಹೂವು ಬಿಟ್ಟಾದ ಬಳಿಕ ಸೀಡ್ ಮಲ್ಟಿಫಿಕೇಷನ್ ಪ್ರೋಸೆಸ್ ಆದರೆ ಮಾತ್ರ ಮಣ್ಣಲ್ಲಿ ಹಾಕ ಬೇಕು. ಆಗಾ ತಾಯಿ ಬಲ್ಬ್ಸ್ನಿಂದ ಬೇರೆ ಬಲ್ಬ್ಗಳು(ಸೀಡ್ಸ್) ನಲ್ಲಿ ಹೆಚ್ಚು ಸೀಡ್ಸ್ಗಳು ಹುಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹೂವು ಬಿಟ್ಟ ತಕ್ಷಣ ಅದರಲ್ಲಿ ಕೇಸರಿ ಇರುತ್ತದೆ. ಅದರಲ್ಲಿ ಹೂವಿನ ಪೆಟಲ್ಸ್ ಬೇರೆ, ಕೇಸರಿ ಬೇರೆ, ಸ್ಟೆಮನ್ಸ್ ಬೇರ್ಪಡಿಸುತ್ತೇವೆ. ಈ ಕೇಸರಿಯ ಹೂವನ್ನು ಔಷಧಕ್ಕೆ ಬಳಕೆ ಮಾಡುತ್ತಾರೆ. ಕೇಸರಿಯನ್ನು ಹಲವು ರೀತಿಯಾಗಿ ಬಳಕೆ ಮಾಡುತ್ತೇವೆ. ಇನ್ನು ಸ್ಟೆಮನ್ಸ್ ಕೂಡ ಕಾಸ್ಮೆಟಿಕ್ಸ್ಗೆ ಬಳಕೆ ಮಾಡುತ್ತಾರೆ ಎಂದು ಜಾಕೋಬ್ ಮಾಹಿತಿ ನೀಡಿದರು.
ಜಾಕೋಬ್ ತಾಯಿ ಲತಾ ಪ್ರತಿಕ್ರಿಯಿಸಿ, ಮಗ ಕೇಸರಿ ಬೆಳೆಯುತ್ತಿದ್ದಾನೆ. ಸ್ವಲ್ಪ ಪ್ರಮಾಣದಲ್ಲಿ ಫಸಲು ಬಂದಿದೆ. ಇನ್ನೂ ಹೆಚ್ಚಾಗಿ ಕೇಸರಿ ಬೆಳೆಯಬೇಕು ಎಂದು ನಿರ್ಧಾರ ಮಾಡಿದ್ದೇವೆ. ಆಂಧ್ರ ಹಾಗೂ ಕಾಶ್ಮೀರಕ್ಕೆ ಹೋಗಿ ತರಬೇತಿ ಪಡೆದು ಸೀಡ್ಸ್ ತಂದು ಬೆಳೆಯುತ್ತಿದ್ದಾನೆ. ಸಂಘದಿಂದ ಸಾಲ ಪಡೆದು ಕೇಸರಿ ಬೆಳೆಯಲು ಮಗನಿಗೆ ಪ್ರೋತ್ಸಾಹ ಕೊಟ್ಟಿದ್ದೇನೆ. ಮಗ ಮನೆಯಲ್ಲಿ ಕೇಸರಿ ಬೆಳೆ ಬೆಳೆದಿರುವುದಕ್ಕೆ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:ಗೂಡ್ಸ್ ಆಟೋಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ ತರಕಾರಿ ವ್ಯಾಪಾರಸ್ಥ: ಏಕೆ ಗೊತ್ತಾ?