ದಾವಣಗೆರೆ: ಕಲೆ ಎನ್ನುವುದು ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ ಎನ್ನುವ ಗಾದೆ ಮಾತಿದೆ. ಸಾವಿರಾರು ಜನರನ್ನು ನಿಬ್ಬೆರಗಾಗುವಂತೆ ಮಾಡುವ ಶಕ್ತಿ ಕಲೆಗಿದೆ. ಅಂತಹದ್ದೇ ಒಂದು ವಿಶಿಷ್ಟ ಕಲೆಯಿಂದ ಇಲ್ಲೊಬ್ಬ ಯುವಕ ಕನ್ನಡದ ಹೆಸರಾಂತ ನಟರ ಭಾವಚಿತ್ರಗಳನ್ನು ಬಟನ್ನಲ್ಲೇ ರಚಿಸುವ ಮೂಲಕ ಗಮನ ಸೆಳೆದಿದ್ದಾನೆ.
ಬಟನ್ನಲ್ಲಿ ವಿಷ್ಣುವರ್ಧನ್ ಭಾವಚಿತ್ರ ಬಿಡಿಸಿದ ಕಲಾವಿದ ನಗರದ ಭರತ್ ಕಾಲೋನಿಯ ಯುವಕ ಪ್ರದೀಪ್ ದೂದಾನಿ ಎನ್ನುವವರು ಈ ರೀತಿಯ ಅದ್ಬುತವಾದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಯುವಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಜಯದೇವ ವೃತ್ತದಲ್ಲಿ ಐದು ರೀತಿಯ ಬಣ್ಣದ 31 ಸಾವಿರ ಶರ್ಟ್ ಬಟನ್‌ಗಳಿಂದ 6 ಅಡಿ ಅಗಲ ಹಾಗೂ 8 ಅಡಿ ಉದ್ದದ ಡಾ.ವಿಷ್ಣುವರ್ಧನ್ ಭಾವಚಿತ್ರ ರಚಿಸಿದ್ದಾರೆ.
66ನೇ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮಕ್ಕೆ ಡಾ.ವಿಷ್ಣುವರ್ಧನ್ ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸುವ ಸಲುವಾಗಿ ಈತ ವಿನೂತನ ಪ್ರಯತ್ನ ಮಾಡಿದ್ದಾನೆ. ರಾತ್ರಿ-ಹಗಲೆನ್ನದೆ ಸತತ ಐದು ದಿನಗಳ ಕಾಲ 31 ಸಾವಿರ ಶರ್ಟ್ ಬಟನ್‌ಗಳಿಂದ ಚಿತ್ರ ಬಿಡಿಸಿದ್ದಾನೆ. ನಗರದ ಜಯದೇವ ವೃತ್ತದಲ್ಲಿ ಈ ಬಟನ್ ಚಿತ್ರ ರಾರಾಜಿಸುತ್ತಿದ್ದು, ಇದನ್ನು ಒಂದು ಸಾಕ್ಷ್ಯ ಚಿತ್ರ ಮಾಡಿ ಚಿತ್ರಕ್ಕೆ ಜೀವ ತುಂಬಿದ್ದಾನೆ.
ಪ್ರದೀಪ್ ಟೈಪಿಂಗ್‌ನಲ್ಲಿ ಚಿತ್ರ ಬಿಡಿಸುವುದು, ದಾರದಲ್ಲಿ ಚಿತ್ರ ಬಿಡಿಸುವುದನ್ನು ಕಲಿತಿದ್ದಾನೆ. ಯಾವುದೇ ತರಬೇತಿ ಶಾಲೆಗೂ ಹೋಗದೇ ಕೇವಲ ಯೂಟ್ಯೂಬ್‌ನಲ್ಲಿ ನೋಡಿ ಈ ರೀತಿಯ ಕಲೆ ಕರಗತ ಮಾಡಿಕೊಂಡಿದ್ದಾನೆ. ಕಳೆದ ಬಾರಿ ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ಅವರ ಬೃಹದಾಕಾರದ ಚಿತ್ರ ಬಿಡಿಸಿ ಗೌರವ ಸಲ್ಲಿಕೆ ಮಾಡಿದ್ದನು.