ದಾವಣಗೆರೆ: ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಕೌರವ' ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಸೂರ್ಯ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಗರಡಿ'. ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಚಾರವಾಗಿ ಟಾಕ್ ಆಗುತ್ತಿದೆ. ಇಂದು ದರ್ಶನ್ ಅವರು ಸಿನಿಮಾದ ಟ್ರೇಲರ್ ಅನಾವರಣಗೊಳಿಸಲಿದ್ದಾರೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಿ.ಸಿ ಪಾಟೀಲ್ ಹಾಗೂ ಯೋಗರಾಜ್ ಭಟ್ ದಾವಣಗೆರೆಯಲ್ಲಿ ಸಿನಿಮಾದ ಪ್ರಮೋಷನ್ ಮಾಡಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಯೋಗರಾಜ್ ಭಟ್, "ಬೆಣ್ಣೆನಗರಿಯೊಂದಿಗೆ ನನಗಿರುವಷ್ಟು ನೆನಪುಗಳು ಯಾರಿಗೂ ಇಲ್ಲ. ನಾನು ಹಂಸಬಾವಿಯಲ್ಲಿ ವ್ಯಾಸಂಗ ಮಾಡುವ ವೇಳೆ ಹಳಿಯಾಳ, ಶಿರಸಿ ಕಡೆಯಿಂದ ಬರುವ ಬಸ್ಗಳು ಬೆಂಗಳೂರಿಗೆ ಹೋಗ್ಬೇಕಾದ್ರೆ ದಾವಣಗೆರೆ ಮೂಲಕವೇ ಹೋಗಬೇಕಿತ್ತು. ಕಾಲೇಜು ಬಿಟ್ಟ ತಕ್ಷಣ ಸ್ಪೆಷಲ್ ಸಿನಿಮಾ ನೋಡಲು ಹುಬ್ಬಳಿಗೆ ಹೋಗುತ್ತಿದ್ದೆವು. ಮೊದಲ ಶೋ ನೋಡಲು ದಾವಣಗೆರೆಗೆ ಬರುತ್ತಿದ್ದೆವು. ಬೆಂಗಳೂರಿಗೆ ಹೋಗುವ ವೇಳೆ ದಾವಣಗೆರೆಯಲ್ಲಿ ಇಳಿದು ಒಂದೂವರೆ ತಾಸು ಉಡಾಳ್ ಗಿರಿ ಮಾಡಿ ಸಿನಿಮಾ ನೋಡಿ ಮತ್ತೆ ಬಸ್ ಹತ್ತುತ್ತಿದ್ದೆವು. ಸಿನಿಮಾ ನಂಟನ್ನು ಬೆಳೆಸಿಕೊಂಡ ಊರು ಎಂದರೆ ಅದು ದಾವಣಗೆರೆ" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ:'ದಯಮಾಡಿ ಉರಿಸಬೇಡ ಬಡವನ ಹೃದಯ'..ಗರಡಿ ಸಿನಿಮಾ ಸಾಂಗ್ ಮೆಚ್ಚಿದ ಪ್ರೇಕ್ಷಕರು