ದಾವಣಗೆರೆ: ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪುಟ್ಟ ಗ್ರಾಮ ಯರಬಳ್ಳಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು. ಇಡೀ ಊರಿಗೆ ಊರೇ ಈಗ ಜ್ವರದಿಂದ ಬಳಲುತ್ತಿದೆ. ಚಿಕನ್ ಗುನ್ಯಾ ಸೋಂಕಿಗೆ ತುತ್ತಾಗಿರುವ ಗ್ರಾಮಸ್ಥರು ಆಸ್ಪತ್ರೆಗೆ ಅಲೆದಾಡಿ ಹೈರಾಣಾಗಿ ಹೋಗಿದ್ದಾರೆ. ದುರದೃಷ್ಟ ಅಂದ್ರೆ ಚಿಕಿತ್ಸೆ ಅರಸಿ ವಿಜಯನಗರ ಜಿಲ್ಲೆಗೆ ಆ ಗ್ರಾಮಸ್ಥರು ತೆರಳಬೇಕಾದರೆ 120 ಕಿಮೀ ಕ್ರಮಿಸಬೇಕು.
ಈ ಗ್ರಾಮದ ಪ್ರತಿಯೊಬ್ಬರಿಗೂ ಮೈ, ಕೈ- ಕಾಲು ನೋವು, ನಿಂತ್ರೆ ಕೂರಲು ಬಾರದ ಪರಿಸ್ಥಿತಿ ಉಂಟಾಗಿದೆ. ಇಡೀ ಗ್ರಾಮದಲ್ಲಿ ಮುನ್ನೂರಕ್ಕು ಹೆಚ್ಚು ಜನರಿಗೆ ಚಿಕನ್‌ಗುನ್ಯಾ ವಕ್ಕರಿಸಿದೆಯಂತೆ. ಇಡೀ ಊರೀಗೆ ಊರೇ ಜ್ವರದಿಂದ ಬಳಲುತ್ತಿದ್ದರೂ ಹತ್ತಿರದ ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ ಆರೋಪ ಸಹ ಕೇಳಿಬಂದಿದೆ.